ADVERTISEMENT

ರೇಟಿಂಗ್ ರೇಜ್

ಲಿಂಗರಾಜು ಡಿ.ಎಸ್
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಸಾ, ಟೀವಿ ಚಾನೆಲ್ಲುಗಳು ರೇಟಿಂಗ್ ಪಾಯಿಂಟ್‌ನ ಅಕ್ರಮವಾಗಿ ತಿರುಚ್ತಾ ಕುಂತವಂತೆ?’ ಅಂತ ತುರೇಮಣೆಯನ್ನ ಕೇಳಿದೆ.

‘ಯಪ್ಪ ನನಕೆಟ್ಟೆ. ಸೀರಿಯಲ್ಲುಗಳು, ನ್ಯೂಸು ನೋಡಿದೇಟ್ಗೆ ಹೊಟ್ಟೇಲಿ ಮೆಣಸಿನಕಾಯಿ ಕಿವಿಚಿದಂಗಾಯ್ತದೆ. ಮಾಸ್ಕು ದಂಡ ಇಳಿಸಿದ್ದು, ವಿದ್ಯಾಗಮವ ಕೊಂದುದ್ದು ನಾವೇ ಅಂತ ಕುಯ್ತರೆ! ರೇಟಿಂಗ್ ರೇಜ್ ಡ್ರಗ್ಗಿದ್ದಂಗೆ ಒಂದು ತೆವಲು ಕನೋ’ ಅಂದರು.

‘ಅದೆಂಗ್ಸಾರ್?’ ಅಂದೆ.

ADVERTISEMENT

‘ನೋಡ್ಲಾ, ಟಿಆರ್‌ಪಿ ಎಲ್ಲಾ ಕ್ಷೇತ್ರದಗೂ ಅದೆ. ಕೊರೊನಾ ಕೇಸು ರೇಟಿಂಗ್ ತಾರಾಮಾರ ಏರ್ತಾದೆ! ಆಸುಪತ್ರೆಯೋರ ರೇಟಿಂಗ್ ಏನು ಕಮ್ಮಿ ಅದಾ! ಸ್ಕೂಲಿನೋರ ಫೀಸು ರೇಟಿಂಗ್ ಆಕಾಸಕ್ಕೊಂಟೋಗದೆ! ರಾಜಕೀಯದೇಲಿ ಕುಮಾರಣ್ಣ ಕಣ್ಣೀರಾಕಿ ರೇಟಿಂಗ್ ಜಾಸ್ತಿ ಮಾಡಿಕ್ಯತದೆ, ಹುಲಿಯಾ ಸರ್ಕಾರ ಬೀಳಿಸಿ ರೇಟಿಂಗ್ ಏರಿಸಿಕ್ಯತದೆ. ರಾಜಾವುಲಿ ಶಾಸಕರುನ್ನೇ ಎಪ್ಪೆಸ್ ಮಾಡಿ ರೇಟಿಂಗ್ ಏರಿಸಿಕ್ಯಂಡದೆ! ಈಗ ಅಂದ್ರಿಗಿನ ಮಂಚಿವಾಡು ರೇಟಿಂಗ್ ಇಳಿದದಂತಪ್ಪ!’

‘ಹಂಗಾದ್ರೆ ಇದು ಪೊಲಿಟಿಕಲ್ ರೇಟಿಂಗ್ ಪಾಯಿಂಟ್ ಅನ್ನಿ. ನಮ್ಮ ಮೋದಿ ಮಾಮನ ಪಿಆರ್‌ಪಿ ಹ್ಯಂಗದೆ?’

‘ಕಾಸ್ಮೀರದ ಇಚಾರಕ್ಕೆ, ಬಾಲಾಕೋಟ್ ಇಚಾರಕ್ಕೆ ಮೋದಿ ಮಾಮನ ಪಿಆರ್‌ಪಿ ಆಕಾಸಕ್ಕೆ ವೊಂಟೋಗಿತ್ತು. ಕೊರೊನಾ ಬಂದಾಗ ಮೊದಲ ತಿಂಗಳು ಚಪ್ಪಾಳೆ ವಡದೋ, ಆಮೇಲೆ ಗಂಟೆ ಬಡದೋ ಕೊರೋನಾ ಕಮ್ಮಿಯಾಗ್ಲಿಲ್ಲ. ಈಗ ಬಾಯಿ ಬಡಕತಿದೀವಿ!’

‘ಲೋಕಲ್ ಪಿಆರ್‌ಪಿ ಹ್ಯಂಗದೆ ಸಾ?’

‘ಉಪಚುನಾವಣೇಲಿ 50,000 ಲೀಡಲ್ಲಿ ಗೆಲ್ಲತೀವಿ. ನಮ್ಮ ಕ್ಯಾಂಡಿಡೇಟು ಜನರ ಮನಸ್ಸಲ್ಲಿ ಅಡವಾಗಿ ಕುಂತುಬುಟ್ಟವರೆ. ನಮಗೆ ಅನುಕಂಪ ವರ್ಕಾಯ್ತದೆ. ನಮ್ಮ ಸರ್ಕಾರದ್ದೇನು ವಸಿ ಸಾಧನೇನಾ! ಅವರ ಯೇಗ್ತೆ ನಮಿಗೆ ಗೊತ್ತುಲ್ಲವೇ? ಎಲ್ಲಾ ಪಕ್ಸದ ರಾಜಕಾರಣಿಗಳು ಪಿಆರ್‌ಪಿ ಏರಿಸಕೆ ಪುಂಗಕುಲ್ವೇನೋ! ಎಲೆಕ್ಸನ್ ಟೇಮಲ್ಲಿ ಜನಾನೂ ರೇಟಿಂಗ್ ಜಾಸ್ತಿ ಮಾಡಿಕ್ಯತರೆ ಕನೋ! ಹಿಂಗೇ ನಮ್ಮನ್ನ ಬಕರ ಮಾಡ್ತರೆ’.

‘ನಿಮ್ಮ ರೇಟಿಂಗ್ ಏರಿಸಕೆ ನಮ್ಮುನ್ನ ಬಕರ ಮಾಡ್ತಿದೀರಲ್ಲ ಹಂಗೆ’ ಅಂದ ಚಂದ್ರು ನಗುತ್ತಾ ಪರಾರಿಯಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.