ADVERTISEMENT

ಚುರುಮುರಿ| ‘ಆಕಾಶ’ದಿಂದ ಜಾರಿ...

ಸುಮಂಗಲಾ
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST
Churumuri-19042021
Churumuri-19042021   

ಪೆನ್ನು, ಹಾಳೆ ಹಿಡಿದಿದ್ದ ಬೆಕ್ಕಣ್ಣ ಹೊಸ ಉತಾವಳಿಯಲ್ಲಿತ್ತು. ‘ನಾ ಒಂದ್ ಕವನ ಬರದೀನಿ, ಓದ್ತೀನಿ ಕೇಳು’ ಎಂದಿತು.

‘ಅಲ್ಲಲೇ... ಅಲ್ಲಿ ನಿಮ್ಮ ಯೆಡ್ಯೂರಜ್ಜಾರು ಎರಡನೇ ಸಲ ಕೊರೊನಣ್ಣನ ಹೊಡತ ತಿಂದು ಆಸ್ಪತ್ರೆಯೊಳಗ ಮಕ್ಕಂಡಾರೆ, ಜ್ವರ ಬಂದು ಕೆಮ್ಮಾಕೆ ಹತ್ತಿದ್ದ ಕುಮಾರಣ್ಣಂಗೇ ಹಾಸಿಗೆ ಸಿಗದೆ, ವೈದ್ಯಕೀಯ ಸಚಿವರ ವಶೀಲಿ ಮ್ಯಾಗೆ ಆಸ್ಪತ್ರಿಗೆ ಸೇರಿಸಿಕೊಂಡರಂತ. ಆಮ್ಲಜನಕ, ರೆಮ್ಡಿಸಿವಿಯರ್ ಕೊರತೆ ಭಯಂಕರ ಐತಂತೆ... ಹಿಂತಾವೆಲ್ಲ ಗೋಳಾಟದಾಗೆ ನೀ ಕವನ ಗೀಚಿಕೋತ ಕುಂತಿ’ ಎಂದು ರೇಗಿದೆ.

‘ಅಜ್ಜಾರು ಆರಾಮಾಗ್ತಾರೇಳು. ಮುಕ್ಕೋಟಿ ಕನ್ನಡಿಗರಷ್ಟೇ ಅಲ್ಲ, ಮೋದಿಮಾಮಾ, ಶಾಣ್ಯಾ ಅಂಕಲ್ಲೂ ಎಲ್ಲರ ಕೃಪೆ ಅವರ ಮ್ಯಾಗೆ ಐತಿ. ಯಾರೋ ಶ್ರೀಸಾಮಾನ್ಯ ಇರಬಕಂತ ಆಸ್ಪತ್ರಿಯೋರು ಮದ್ಲಿಗಿ ಹಾಸಿಗಿ ಇಲ್ಲ ಅಂದಿದ್ರಂತ, ಕುಮಾರಣ್ಣ ಅಂತ ಗೊತ್ತಾಗತಿದ್ದಂತೆ ಮಕ್ಕೋ ಬಾಪ್ಪ ಅಂತ ಕರೆದಾರ. ಇವೆಲ್ಲ ಕಣ್ಣಿಗೆ ಕಾಣೂ ಗೋಳಾಟಗಳು. ಅಗೋಚರ ಗೋಳಾಟಗಳು ರಗಡ್ ಅದಾವು... ಅಂಥ ಒಂದ್ ವಿಷಯದ ಮ್ಯಾಗ ನಾ ಚರಮಗೀತೆ ಬರದೀನಿ... ಕೇಳು’ ಎಂದ ಬೆಕ್ಕಣ್ಣ ಓದತೊಡಗಿತು.

ADVERTISEMENT

‘ಅಂದು ನಿಮ್ಮೆಲ್ಲರ ಆಕಾಶವಾಣಿ

ನಾನೀಗ ಅರೆಸತ್ತವಾಣಿ,
ಅಂದು ಕನ್ನಡಕುಲಪುತ್ರಿ
ಇಂದು ಕಂಗ್ಲಿಷ್‌ ಗುರು!

ಸಾಹಿತ್ಯ ಸಂಜೆ, ಸಂಗೀತ ಸುಧೆ
ಈ ಹಳೆಹೆಸರುಗಳ ಬಿಸಾಕಿ;
ಇನ್ನೀಗ ಲಿಟರರಿ ಗುರು, ಟೆಕ್‌ ಗುರು ಇತ್ಯಾದಿ
‘ಗುರು’ಗಳ ಸಂತೆಯು... ವಿಶ್ವ‘ಗುರು’ವಿನ

‘ಮನ್ ಕೀ ಬಾತ್’ ಕೇಳುವ ನೀವು

ಆ ಮನದೊಳಗಿನ ಸುಪ್ತ ಮಾತಿಗೆ ಕಿವುಡು;
ಕರುನಾಡಿನ ಎಲ್ಲ ಆಕಾಶವಾಣಿ ಕೇಂದ್ರಗಳು ಇನ್ನೀಗ ಉಲಿಯಲಿವೆ

ಬೆಂಗಳೂರು ಕೇಂದ್ರದ ಪಿಸುಮಾತು;
ಅಂದು ಕನ್ನಡಿಗರೊಬ್ಬರು
ಆಕಾಶವಾಣಿಯೆಂಬ ಹೆಸರನಿಟ್ಟರು,
ಇಂದು ಅದರ ಬಹುತ್ವಕೊಂದು
ಮೊಳೆ ಹೊಡೆದು
‘ಕೇಂದ್ರೀಕೃತ ಅರೆಸತ್ತವಾಣಿ’
ಫಲಕ ನೇತುಬಿಟ್ಟಿಹರು...’‌

ಬೆಕ್ಕಣ್ಣನ ಕವನ ವಾಚನ ಮುಗಿಯುವ ಲಕ್ಷಣವೇ ಇಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.