ADVERTISEMENT

ಚುರುಮುರಿ| ಬೈಗುಳ ಗಣಿತ

ಮಣ್ಣೆ ರಾಜು
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

‘ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಅನ್ನುವಂತೆ, ಬೈ ಎಲೆಕ್ಷನ್ ಮುಗಿದರೂ ರಾಜಕಾರಣಿಗಳ ಬೈಗುಳ ನಿಂತಿಲ್ಲ...’ ನ್ಯೂಸ್ ಪೇಪರ್ ಓದುತ್ತಾ ಸುಮಿ ಗೊಣಗಿಕೊಂಡಳು.

‘ಈಗ ಕಾಲ ಬದಲಾಗಿದೆ. ಚುನಾವಣಾ ಪ್ರಚಾರದಲ್ಲಿ ನಾಯಕರು ಎದುರಾಳಿಗಳನ್ನು ಬೈದಾಗ ಸಿಗುವ ಕಿಮ್ಮತ್ತು ಗಾಂಧಿ, ಬುದ್ಧನ ಕಥೆ ಹೇಳಿದರೆ ಸಿಗುವುದಿಲ್ಲವಂತೆ. ಬೈಗುಳ ಆಧರಿಸಿ ಮತ ಗಳಿಕೆಯ ಲೆಕ್ಕ ಹಾಕುತ್ತಿದ್ದಾರೆ’ ಎಂದ ಶಂಕ್ರಿ.

‘ಹೀಗೆ ಬೈದಾಡಿದ್ರೆ ನಾಯಕರ ಗಾತ್ರ, ಘನತೆಗೆ ಧಕ್ಕೆ ಆಗೋದಿಲ್ವೇ?’

ADVERTISEMENT

‘ಆಗೊಲ್ಲವಂತೆ, ನಾಯಕರು ಯಾವ ಸಂದರ್ಭದಲ್ಲಿ, ಯಾವ ಭಾಷೆಯಲ್ಲಿ ಬೈದರು ಎಂಬುದನ್ನು ಕೂಡಿ-ಕಳೆದು, ಎಣಿಸಿ-ಗುಣಿಸಿ, ಭಾಗಿಸಿ, ತೂಗಿಸಿದಾಗ ಚುನಾವಣೆಯ ಪಕ್ಕಾ ಲೆಕ್ಕ ಸಿಗುತ್ತದೆ’ ಅಂದ ಶಂಕ್ರಿ.

‘ಎ ಪಕ್ಷದವರು ಬಿ ಪಕ್ಷದವರನ್ನು ಬೈದರು, ಹಾಗೇ ಆ ಪಕ್ಷದವರು ಈ ಪಕ್ಷದವರನ್ನು ತಿರುಗಿಸಿ ಬೈದರು. ಅಂತಿಮ ಉತ್ತರ ಏನು ದೊರೆಯುತ್ತದೆ?’

‘ಸರಳ ಗಣಿತ. ಎ ಪ್ಲಸ್ ಬಿ ಹೋಲ್ ಸ್ಕ್ವೇರ್ ಈಸ್ ಈಕ್ವಲ್ ಟು ಎ ಸ್ಕ್ವೇರ್ ಪ್ಲಸ್ ಟೂ ಎಬಿ ಪ್ಲಸ್ ಬಿ ಸ್ಕ್ವೇರ್...’

‘ನನಗೆ ಅರ್ಥ ಆಗಲಿಲ್ಲ’.

‘ನನಗೂ ಅರ್ಥವಾಗಿಲ್ಲ. ಪಕ್ಷದ ನಾಯಕರ ಒಟ್ಟು ಬೈಗುಳವನ್ನು ಕ್ಷೇತ್ರದ ಮತದಾರರ ಒಟ್ಟಾರೆ ಅಭಿರುಚಿಯಿಂದ ಭಾಗಿಸಬೇಕು. ಶೇಷ ಸೊನ್ನೆ ಬದಲು ಇನ್ನೇನಾದರೂ ಉಳಿದರೆ, ಕ್ಷೇತ್ರದಲ್ಲಿ ಆ ಪಕ್ಷ ಉಳಿಯುತ್ತದೆ’ ಎಂದ ಶಂಕ್ರಿ.

‘ಅಲ್ಲಾರೀ, ಹೀಗೆಲ್ಲಾ ಬೈದಾಡಿದರೆ ಬರಬೇಕಾದ ವೋಟುಗಳೂ ಮೈನಸ್ ಆಗೋದಿಲ್ವೇ?’

‘ಆಗೊಲ್ಲ, ಯಾಕೆಂದರೆ ಎದುರಾಳಿ ಪಕ್ಷದವರೂ ಅಷ್ಟೇ ಪ್ರಮಾಣದಲ್ಲಿ ಬೈದು ಮೈನಸ್ ಮಾಡಿಕೊಳ್ಳುವುದರಿಂದ ಮೈನಸ್ ಇಂಟು ಮೈನಸ್ ಪ್ಲಸ್ ಆಗುತ್ತದೆ...’

‘ಚುನಾವಣೆ ಗಣಿತ ಅರ್ಥವಾಗುತ್ತಿಲ್ಲ, ಮೊದಲೇ ನಾನು ಗಣಿತದಲ್ಲಿ ವೀಕು...’ ಎನ್ನುತ್ತಾ ಸುಮಿ ನ್ಯೂಸ್ ಪೇಪರ್ ಮಡಚಿಟ್ಟು ಎದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.