ADVERTISEMENT

ಚುರುಮುರಿ: ಬೈಯ್ಯೋಗ್ರಫಿ

ಮಣ್ಣೆ ರಾಜು
Published 7 ಜೂನ್ 2022, 19:31 IST
Last Updated 7 ಜೂನ್ 2022, 19:31 IST
   

‘ನಮ್ಮ ಮಹನೀಯರು ಕತೆ, ಕವನದಂಥ ಬರಹಗಳ ಜೊತೆ ತಮ್ಮ ಬಯಾಗ್ರಫಿಯನ್ನೂ ಬರೆಯಬೇಕಾಗಿತ್ತೂರೀ, ಅವರ ಚರಿತ್ರೆಯನ್ನು ಇನ್ಯಾರೋ ಬರೆದು, ಅದು ಸರಿಯಿಲ್ಲ ಅಂತ ಮತ್ಯಾರೋ ಹೇಳಿ ಗೊಂದಲ ಆಗುವುದು ತಪ್ಪುತ್ತಿತ್ತು’ ಅಂದಳು ಸುಮಿ.

‘ಹೌದು, ಮುಂದೆ ಪಠ್ಯವಾಗಬಹುದಾದ ಮಹನೀಯರು ಈಗಲಾದರೂ ತಮ್ಮ ಚರಿತ್ರೆಯನ್ನು ತಾವೇ ಬರೆಯಬೇಕು. ಆಗ ಇತಿಹಾಸ ತಿರುಚುವುದು, ಚರಿತ್ರೆಯನ್ನು ಪರಚು ವುದು ತಪ್ಪುತ್ತದೆ. ಮುಖ್ಯವಾಗಿ ರಾಜಕಾರಣಿಗಳು ಬೈದಾಡಿಕೊಳ್ಳುವುದು ತಪ್ಪುತ್ತದೆ’ ಎಂದ ಶಂಕ್ರಿ.

‘ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಗಳು ತಮ್ಮ ಬೈಯ್ಯೋಗ್ರಫಿಯನ್ನು ಬದಲಾಯಿಸಿಕೊಳ್ಳಬೇಕು. ಅವರು ಅಸಂವಿಧಾನಾತ್ಮಕ ಪದ ಬಳಸಿ ಬೈದಾಡುವುದನ್ನು ಕೇಳಲಾಗುತ್ತಿಲ್ಲ...’ ಟಿ.ವಿ. ನ್ಯೂಸ್ ಆಫ್ ಮಾಡಿದಳು.

ADVERTISEMENT

‘ಸಂವಿಧಾನಬದ್ಧ ಬೈಗುಳ ಅಂತ ಯಾವುದೂ ಇಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷಗಳು ಅತ್ತೆ, ಸೊಸೆ ಇದ್ದಂತೆ ಬೈದಾಡಿಕೊಂಡು ಬಾಳ್ವೆ ಮಾಡಬೇಕು’.

‘ಸಾರ್ವಜನಿಕವಾಗಿ ಬೈಯ್ಯುವಾಗ ಆರೋಗ್ಯ ಕರ ಬೈಗುಳ ಬಳಸಬೇಕು ಅಲ್ಲವೇನ್ರೀ?’ ‘ಆಗಬಹುದು, ಆದರೆ ಆನಂದಕರ, ಆಹ್ಲಾದಕರ, ಹಿತಕರವಾದ ಬೈಗುಳಗಳಿಲ್ಲ, ನೋವಾಗಲಿ ಅನ್ನುವ ಉದ್ದೇಶದಿಂದಲೇ ಬೈಯ್ಯುತ್ತಾರೆ’.

‘ಏನೋಪ್ಪಾ, ವೇದಿಕೆ, ಮೈಕು ಸಿಕ್ಕಿಬಿಟ್ಟರೆ ರಾಜಕಾರಣಿಗಳು ಎದುರಾಳಿಗಳನ್ನು ಬೈದು ಅವರ ಬಣ್ಣ ಬಯಲು ಮಾಡಿಬಿಡ್ತಾರೆ’.

‘ಎದುರು ಪಕ್ಷದವರನ್ನು ಎದುರಿಸಲು ಬೈಗುಳವೇ ಅಸ್ತ್ರವಾಗಿರುವಾಗ ರಾಜಕಾರಣಿಗಳು ಬೈಯ್ಯುವ ಸಾಮರ್ಥ್ಯ ಬೆಳೆಸಿಕೊಳ್ಳಬಹುದು. ಇಲ್ಲವಾದರೆ ಅಸಹಾಯಕ, ದುರ್ಬಲ ಎಂದು ಪಕ್ಷದ ನಾಯಕರು, ಬೆಂಬಲಿಗರು ಕಡೆಗಣಿಸಬಹುದು ಅನ್ನೋ ಆತಂಕ ಅವರಿಗಿರಬಹುದು. ಈಗಂತೂ ರಾಜಕಾರಣಿಗಳ ಮೈಮೇಲೆ ಎಲೆಕ್ಷನ್ ದೇವರು ಬಂದಿದೆ, ಅವರನ್ನು ಕಂಟ್ರೋಲ್ ಮಾಡೋದು ಕಷ್ಟ. ಬೈಗುಳವನ್ನು ಮನರಂಜನೆ ಅಂದುಕೊಂಡು ಆನಂದಿಸು...’ ಎಂದು ಶಂಕ್ರಿ ಸಮಾಧಾನ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.