ADVERTISEMENT

ಚುರುಮುರಿ| ಸರಿಗನ್ನಡಂ...

ಮಣ್ಣೆ ರಾಜು
Published 28 ಡಿಸೆಂಬರ್ 2021, 19:31 IST
Last Updated 28 ಡಿಸೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಹೊಸ ವರ್ಷದ ನಿನ್ನ ಹೊಸ ಸಂಕಲ್ಪ ಏನು?’ ಶಂಕ್ರಿ ಕೇಳಿದ.

‘ನಮ್ಮನೆಗೆ ಹಾಲು ಕೊಡುವ ಹಾಲಮ್ಮನಿಗೆ ಸ್ವಚ್ಛ ಕನ್ನಡ ಕಲಿಸಲು ತೀರ್ಮಾನ ಮಾಡಿದ್ದೇನೆ’ ಅಂದಳು ಸುಮಿ.

‘ಹಾಲಮ್ಮ ಅಚ್ಚಗನ್ನಡತಿ. ಆಕೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಅದರ ಬದಲು ಗಣಿತ ಕಲಿಸು, ಹಾಲಿನ ಲೆಕ್ಕ ಹಾಕಲು
ಅನುಕೂಲವಾಗುತ್ತದೆ’.

ADVERTISEMENT

‘ಹಾಲಮ್ಮ ಅನ್ನುವ ತನ್ನ ಹೆಸರನ್ನೇ ಆಲಮ್ಮ ಅಂತ ತಪ್ಪಾಗಿ ಬರೆಯುತ್ತಾಳೆ ಕಣ್ರೀ, ಕೇಳಿದ್ರೆ, ಆಲಮ್ಮ ಅನ್ನೋದು ನಮ್ಮ ಮನೆ ದೇವರ ಹೆಸರು ಅಂತಾಳೆ’.

‘ಹಾಗಂತ, ಅವರ ಮನೆ ದೇವರ ಹೆಸರನ್ನು ತಿದ್ದುಪಡಿ ಮಾಡ್ತೀಯಾ?’

‘ಅಷ್ಟೇ ಅಲ್ಲಾರೀ, ಹಾಲನ್ನು ಆಲು ಅಂತಾಳೆ. ಹಸುವನ್ನು ಅಸು ಎಂದು ಕರೆಯುತ್ತಾಳೆ’.

‘ಹಾಲಮ್ಮನ ಭಾಷೆ ಹಸುವಿಗೆ ಅರ್ಥ ಆಗುತ್ತೆ. ಹಾಲಮ್ಮ ಕರೆದರೆ ಹಸುನೂ ಬರುತ್ತೆ, ಅದರ ಹಾಲೂ ಬರುತ್ತದೆ ಬಿಡು’.

‘ಕನ್ನಡದ ಉಚ್ಚಾರಣೆ ಸ್ವಚ್ಛವಾಗಿರಬೇಕು ಅಲ್ವೇನ್ರೀ?’

‘ಇರಬೇಕು, ಏನು ಮಾಡೋದು. ಕೊರೊನಾವನ್ನು ಕೊರಾನ, ಕರೋನ ಅಂತ, ಅದರ ರೂಪಾಂತರಿ ವೈರಸ್ಸನ್ನು ಓಮೈಕ್ರಾನ್, ಒಮೆಕ್ರಾನ್, ಒಮೈಕ್ರೋನ್ ಅಂತ ಒಬ್ಬೊಬ್ಬರು ಒಂದೊಂದು ರೀತಿ ಉಚ್ಚರಿಸುತ್ತಾರೆ. ಉಚ್ಚಾರಣೆ ವ್ಯತ್ಯಾಸವಾದರೂ ರೋಗ ಬಾಧೆಯಲ್ಲಿ ವ್ಯತ್ಯಾಸವಾಗದು’.

‘ಅವು ಇಂಗ್ಲಿಷ್ ಪದಗಳು, ಹೇಗಾದರೂ ಕರೆದುಕೊಳ್ಳಲಿ, ನಮ್ಮ ಕನ್ನಡ ಸ್ವಚ್ಛವಾಗಿರಬೇಕು ಕಣ್ರೀ. ಕನ್ನಡಿಗರೇ ಕನ್ನಡವನ್ನು ನೆಟ್ಟಗೆ ಮಾತನಾಡದಿದ್ದರೆ ಪರಭಾಷಿಗರು ಸ್ವಚ್ಛಗನ್ನಡ ಮಾತನಾಡಲು ಸಾಧ್ಯನಾ?’

‘ಹಾಗಂತ ಹಾಲಮ್ಮನ ಕನ್ನಡ ತಿದ್ದಲು ಹೋಗಬೇಡ, ಅದು ಆಕೆಯ ನುಡಿಗನ್ನಡ, ಮನೆ ಗನ್ನಡ. ಅದರಿಂದ ಕನ್ನಡಕ್ಕೇನೂ ಹಾನಿಯಾಗು ವುದಿಲ್ಲ... ಕಿಚನ್, ಬಾತ್‌ರೂಂ, ಲಂಚ್, ವಾಟರ್, ರೈಸ್, ವೆಜಿಟೆಬಲ್ಸ್ ಅನ್ನು ಕನ್ನಡ ಪದಗಳು ಅಂದುಕೊಂಡು ಮಾತನಾಡುವ ನಮ್ಮ ಮಕ್ಕಳ ಭಾಷೆ ಬದಲಾಯಿಸು. ಮನೆಯಿಂದಲೇ ಸರಿಗನ್ನಡ ಶುರುವಾಗಲಿ’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.