ADVERTISEMENT

ವೈರಸ್ ವೈರಾಗ್ಯ

ಸಿ.ಎನ್.ರಾಜು
Published 7 ಜನವರಿ 2022, 19:31 IST
Last Updated 7 ಜನವರಿ 2022, 19:31 IST
   

‘ಡಾಕ್ಟ್ರೇ, ನನ್ನ ಗಂಡ ರಾತ್ರಿ ನಿದ್ದೆಯಲ್ಲಿ ಚಿಟಾರನೆ ಚೀರುತ್ತಾರೆ, ಹಗಲಲ್ಲಿ ವಿಚಿತ್ರವಾಗಿ ಆಡ್ತಾರೆ. ಏನು ಕಾಯಿಲೆ ಅಂತ ಚೆಕ್ ಮಾಡಿ ಚಿಕಿತ್ಸೆ ಕೊಡಿ’ ಅನು ಕೇಳಿಕೊಂಡಳು.

‘ಹೌದಾ ಸಾರ್?’ ಡಾಕ್ಟರ್ ಕೇಳಿದರು. ಹೌದೆಂದು ಗಿರಿ ತಲೆಯಾಡಿಸಿದ.

‘ಮಾತು ಕಮ್ಮಿ ಮಾಡಿದ್ದಾರೆ. ನಾನು ರೇಗಿದರೆ ತಿರುಗಿಸಿ ರೇಗುವುದಿಲ್ಲ, ಬೈದರೆ ವಾಪಸ್ ಬೈಯ್ಯುವುದಿಲ್ಲ. ಗಂಡ-ಹೆಂಡ್ತಿ ನಡುವೆ ಸಣ್ಣ ಜಗಳವೂ ಇಲ್ಲ, ಹಿಂಗಾದ್ರೆ ಸಂಸಾರ ನಡೆಯುತ್ತಾ ಸಾರ್?’ ಅನುವಿನ ಆತಂಕದ ನುಡಿ.

ADVERTISEMENT

‘ಹೌದೇ? ಛೇಛೇ...’ ಡಾಕ್ಟರ್ ಲೊಚಗುಟ್ಟಿದರು.

‘ಮನೇಲಿ ನಾನು, ಮಕ್ಕಳು ಕೆಮ್ಮುವಂತಿಲ್ಲ, ಸೀನುವಂತಿಲ್ಲ. ಒಗ್ಗರಣೆ ಘಾಟಿಗೂ ಕೆಮ್ಮ ಬಾರದೇ? ಕೆಮ್ಮು ಬಂದಾಗ ಆಚೆ ಹೋಗಿ ಕೆಮ್ಮಿ ಬರ್ತೀವಿ’ ಸಂಕಟ ತೋಡಿಕೊಂಡಳು.

‘ಮನೆ ಅಂದಮೇಲೆ ಒಗ್ಗರಣೆ ಇದ್ದೇ ಇರುತ್ತೆ, ಕೆಮ್ಮಿಕೊಂಡಿರಬೇಕು... ಎರಡು ಡೋಸ್ ಲಸಿಕೆ ಪಡೆದಿದ್ದಾರಾ?’ ಕೇಳಿದ್ರು ಡಾಕ್ಟರ್.

‘ಪಡೆದಿದ್ದಾರೆ. ಇನ್ಯಾವುದೋ ಹೊಸ ವೈರಸ್ ಅಟ್ಯಾಕ್ ಆಗಿರಬೇಕು ಅನಿಸ್ತಿದೆ...’ ಅನು ಕಣ್ಣೀರು ಒರೆಸಿಕೊಂಡಳು.

ಗಿರಿಯನ್ನು ಡಾಕ್ಟರ್ ಒಳಗೆ ಕರೆದುಕೊಂಡು ಹೋಗಿ, ‘ಏನು ನಿಮ್ಮ ಸಮಸ್ಯೆ?’ ಎಂದು ಕೇಳಿದರು.

‘ಡಾಕ್ಟ್ರೇ, ಮೊದಲ ಅಲೆಯಲ್ಲಿ ಕೊರೊನಾ ಟ್ರೀಟ್‍ಮೆಂಟಿಗೆ ಸಾವಿರಾರು ರೂಪಾಯಿ ಖರ್ಚಾ ಯಿತು. ಅದರ ಸಾಲ ಇನ್ನೂ ತೀರಿಲ್ಲ. ಮತ್ತೆ ವೈರಸ್ ವಕ್ಕರಿಸಿಕೊಂಡರೆ ಗತಿಯೇನು ಎನ್ನುವ ಆತಂಕದಲ್ಲಿದ್ದೀನಿ’ ಅಂದ.

ಗಿರಿ ಜೊತೆ ಹೊರಗೆ ಬಂದ ಡಾಕ್ಟರ್, ‘ನಿಮ್ಮ ಗಂಡನಿಗೆ ವೈರಸ್ ವೈರಾಗ್ಯ ರೋಗವಿದೆ’ ಎಂದರು.

‘ಇದ್ಯಾವ ರೂಪಾಂತರಿ ರೋಗ ಸಾರ್?’ ಅನುಗೆ ಭಯ.

‘ಇದು ಹಳೆ ರೋಗದ ಹೊಸ ಲಕ್ಷಣ. ಕೊರೊನಾ ಮೂರನೇ ಅಲೆ ಮುಗಿಯುವವರೆಗೂ ವೈರಾಗ್ಯದ ವೈರಸ್ ಕಾಟ ಇರುತ್ತದೆ. ನೀವೆಲ್ಲರೂ ಕೋವಿಡ್‌ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸ್ತಾ ನಿಮ್ಮ ಪಾಡಿಗೆ ನೀವು ತೆಪ್ಪಗಿದ್ರೆ ವೈರಾಗ್ಯ ನಿವಾರಣೆಯಾಗಿ ಆರೋಗ್ಯ ಸುಧಾರಣೆಯಾಗು
ತ್ತದೆ...’ ಎಂದು ಡಾಕ್ಟರ್ ಧೈರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.