ADVERTISEMENT

ಚುರುಮುರಿ: ನಿನ್ನಿಚ್ಛೆಯಂತಿರುವೆ...

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:30 IST
Last Updated 4 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ...ಏನ್ರೀ? ರೀ... ಅಂದ್ರೆ ಸರಿ ಅಂತೀರಲ್ಲ?’

‘ನಾ ಹೇಳಿದ್ದು ಪಕ್ಕಕ್ಕೆ ‘ಸರಿ’ ಅಂತ ಅಲ್ವೆ, ಸಮ್ಮತಿಸೂಚಕ ‘ಸರಿ’!

‘ಹಾಗ್ಬನ್ನಿ ದಾರೀಗೆ, ಅದಿರ್‍ಲಿ ಈ ಬಾರಿ ಆ್ಯನಿವರ್ಸರಿಗೆ ಏನು ಗಿಫ್ಟ್?’

ADVERTISEMENT

‘ಓಹ್ ಅದಾ! ಮರೆತುಬಿಟ್ಟಿದ್ದೆ ಅನ್ನಲ್ಲ... ಇದು ಸಿಲ್ವರ್ ಜ್ಯುಬಿಲಿ ಆ್ಯನಿವರ್ಸರಿ ಅಲ್ಲವೇ? ಬೆಳ್ಳೀದು ಏನಾರೂ...’

‘ಕಾಲುಂಗುರ, ಗೆಜ್ಜೆ ಅಂತ ಇನ್ನೂ ಕಾಲಲ್ಲೇ ಕೂಡಬೇಡಿ, ಕಾಲ ಸಾಕಷ್ಟು ಮುಂದುವರಿದಿದೆ. ಸ್ವಲ್ಪ ಕತ್ತಿನ ಕಡೆನೂ ಗಮನಹರಿಸಿ’.

‘ನಾನಿನ್ನೂ ಕಾಲು, ಶೂಸು, ಲೇಸು ಇಲ್ಲೇ ಇದೀನಿ. ನೀನು ನೆಕ್ಲೆಸಿಗೆ ಹೋಗಿದೀಯ’.

‘ಮತ್ತಿನ್ನೇನ್ರಿ? ಈ ಕಾಲದ ಇರುವೆಗಳೂ ಚಿನ್ನದ ಸರದ ಮೋಹಕ್ಕೆ ಬಿದ್ದಿವೆಯಂತೆ! ನೋಡಲಿಲ್ವೇ ಸಾಮಾಜಿಕ ಜಾಲತಾಣದಲ್ಲಿ!’

‘ಜಾಲತಾಣನಾ... ‘ಜಾಲಿ’ ತಾಣಗಳೂ ಬೇಕಾದಷ್ಟಿರ್ತಾವೆ ಬಿಡು’.

‘ಇಲ್ಲಾರಿ ನೋಡಿ ಬೇಕಾದ್ರೆ, ಹಿರಿಯ ಅಧಿಕಾರಿಯೊಬ್ಬರು ‘ಇರುವೆಗಳು ಚಿನ್ನದ ಸರವನ್ನು ಹೇಗೆ ಕಚ್ಚಿ, ಎಳೆದುಕೊಂಡು ಹೋಗ್ತಾಯಿವೆ ನೋಡಿ’ ಅಂತ ಹಾಕಿದ್ದಾರಂತೆ’.

‘ಸಕ್ಕರೆ-ಸರ ಆಗಿದ್ರೆ ಸರಿ ಅನ್ನಬಹುದಿತ್ತು, ಈ ಇರುವೆಗಳಿಗೇಕೆ ಚಿನ್ನದ ಮೋಹ ಅಂತ?!’

‘ಅವು ಹೆಣ್ಣು ಇರುವೆಗಳು ಅಂತ ಹಾಕಿದಾರಾ ಚಿನ್ನಾ?!’

‘ಚಿನ್ನಾ ಅಂತೆ?- ಈ ಗಿಲೀಟಿನ ಮಾತು ಬೇಡ, ಅವ್ರು ಜಂಡರ್ ಏನೂ ಹಾಕಿಲ್ಲ’.

‘ಅಲ್ಲ, ಕನ್ನಡಿ ಮೇಲೆ ಸೊಳ್ಳೆ ಬಂದು ಕುಳಿತು ತೊಂದ್ರೆ ಮಾಡ್ತಿತ್ತಂತೆ, ಅದು ಹೆಣ್ಣು ಸೊಳ್ಳೆನೇ ಇರಬೇಕು ಅಂತ ಜೋಕ್ ಓದಿದ್ದೆ’.

‘ಚೀಪ್ ಜೋಕ್’.

‘ಅಲ್ಲೂ ಇರುವೆ, ಇಲ್ಲೂ ಇರುವೆ ಅನ್ನೋ ಚಿತ್ರಗೀತೆನಾ ನಿಜ ಮಾಡೋಕೆ ಹಾಗೆ ಮಾಡಿರಬೇಕಷ್ಟೆ. ಈ ಚಿನ್ನಕ್ಕೆ ಟ್ವೆಂಟಿಟು- ಟ್ವೆಂಟಿ ಫೋರ್ ಕ್ಯಾರೆಟ್ ಅಂತಾರಲ್ಲ, ಚಿನ್ನದಲ್ಲೂ ಕ್ಯಾರೆಟ್ ಇರಬಹುದು ಅಂತ ಹೊಸ ಜನರೇಷನ್ ಇರುವೆಗಳು ಹುಡುಕುತ್ತಿದ್ದಿರಬಹುದು, ಬಹುಶಃ ಅವು ಮೊಲದ ಫ್ರೆಂಡ್ಸೂ ಇರಬಹುದು...’

‘ನೀವು ಹೀಗೇ ಇರುವೆ, ಮೊಲ ಅಂತಾ ಇದ್ರೆ, ನಾನು ಹುಲಿ ಆಗಬೇಕಾಗತ್ತೆ ಅಷ್ಟೇ...’

‘ಸರಿ, ಸರಿ... ಆ್ಯನಿವರ್ಸರಿ...
ನೀನೇ ಸರಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.