ADVERTISEMENT

ಚುರುಮುರಿ| ಕರೆಂಟ್ ಅಫೇರ್ಸ್

ಕೆ.ವಿ.ರಾಜಲಕ್ಷ್ಮಿ
Published 1 ಅಕ್ಟೋಬರ್ 2021, 19:31 IST
Last Updated 1 ಅಕ್ಟೋಬರ್ 2021, 19:31 IST
Churumuri-02102021
Churumuri-02102021   

‘ಕರೆಂಟ್ ಸ್ಕೂಟರ್ ಆಯಿತು, ಕರೆಂಟ್ ಬಸ್ಸು ಶುರುವಾಗಿದೆಯಂತೆ? ವಾಯುಮಾಲಿನ್ಯ ಕಡಿಮೆಯಾಗುತ್ತೆ, ಒಳ್ಳೇದೇ ಆಯಿತು’ ಅತ್ತೆಯವರಿಂದ ಅಪ್‌ಡೇಟ್.

‘ಇವತ್ತಿಂದ ನೂರಕ್ಕೆ ನೂರು’ ನಾನೆಂದೆ.

‘ಪುಟ್ಟಿಯ ಪರೀಕ್ಷೆ ರಿಸಲ್ಟ್ ಬಂತೇ?’ ಅತ್ತೆ ಕನ್ನಡಕ ಸರಿಪಡಿಸಿಕೊಳ್ಳುತ್ತ ಕೇಳಿದರು.

ADVERTISEMENT

‘ನಿನ್ನ ಭ್ರಮೆ, ಬುದ್ಧಿಗೂ ಅಂಕಕ್ಕೂ ತಾಳೆ ಹಾಕಬಾರದು ಅಂತ ಅವಳ ವಾದ. ಥಿಯೇಟರ್‌ಗಳಲ್ಲಿ, ಹೌಸ್‌ಫುಲ್ ಬೋರ್ಡ್ ಕಾಣೋ ಅದೃಷ್ಟ ಇದೆ ಅಂತ ಹೇಳ್ತಿರೋದು’ ನನ್ನವಳು ಮಾತಲ್ಲೇ ಮೊಟಕಿದಳು.

‘ಇನ್ನೇನು ದೇವಸ್ಥಾನಗಳಲ್ಲೂ ಮೊದಲಿನ ಹಾಗೆ ಪೂಜೆ ಪುನಸ್ಕಾರ ನಡೆಯುತ್ತೆ, ಹೊಸ ಸೀರೆ, ಉಡುಗೆ ತೊಟ್ಟು ಹೋಗಬಹುದು’ ಶಮನಗೊಳಿಸುವ ನುಡಿ ಚೆಲ್ಲಿದೆ.

‘ಮುಖ್ಯವಾಗಿ ಎಲ್ಲರ ಲಸಿಕೆ ಸರ್ಟಿಫಿಕೇಟು ಒಂದಷ್ಟು ಕಾಪಿ ಮಾಡಿ ಇಟ್ಕೊಂಡ್ರೆ ಒಳ್ಳೇದು’ ಅತ್ತೆಯ ಸಲಹೆ. ‘ಒಂದು ಸಾಲದೇ? ಒಂದಷ್ಟು ಯಾಕೋ?’ ನನ್ನ ಡೌಟು.

‘ಅಯ್ಯೋ ಅಪ್ಪಾ... ಎಲ್ಲಾ ಜಂಬದ ಚೀಲಗಳಲ್ಲಿ ಒಂದೊಂದು ಇದ್ರೆ ಯಾವುದು ತೊಗೊಂಡು ಹೋದ್ರೂ ನಿರಾಳ’ ಪುಟ್ಟಿ ಕಾಲೆಳೆದಳು. ‘ಬೆಳಿಗ್ಗೆಯಿಂದ ನಮ್ಮ ಏರಿಯಾಲಿ ಕರೆಂಟ್ ಇಲ್ಲ, ಅದಕ್ಕೆ ಇಲ್ಲಿಗ್ಬಂದೆ’ ಎನ್ನುತ್ತಲೇ ಕಂಠಿ ಕಾಲಿಟ್ಟ.

‘ಈ ಕರೆಂಟ್ ಬಗ್ಗೆ ಏನ್ ಹೇಳೋದು? ನಿನ್ನೆ ಇಡೀ ದಿನ ಕರೆಂಟ್ ಇರೋಲ್ಲ ಅಂತ ಪೇಪರ್‌ನಲ್ಲಿ ಓದಿ ಬೆಳಿಗ್ಗೆ ಹತ್ತರ ಒಳಗೆ ಎಲ್ಲ ಕೆಲಸ ಮುಗಿಸಿದ್ವಿ, ಮೋಟರ್ ಹಾಕಿ ನೀರು ತುಂಬಿಕೊಂಡಿದ್ವಿ’.

‘ಮೊಬೈಲ್‌ಗಳನ್ನೂ ಫುಲ್ ಚಾರ್ಜ್ ಮಾಡಿದ್ವಿ, ಇಡೀ ದಿನ ಕಳೀಬೇಕಲ್ಲ?’

‘ಆದರೆ ಕರೆಂಟು ಹೋಗಲೇ ಇಲ್ಲ. ಇವತ್ತು ಕರೆಂಟ್ ಇರೋಲ್ಲ ಅಂತ ಮುನ್ಸೂಚನೆ ಕೊಟ್ಟಿಲ್ಲ, ಒಂದು ಕೆಲಸವೂ ಆಗಿಲ್ಲ, ಸ್ನಾನಕ್ಕೆ ಗ್ಯಾಸ್‌ನಲ್ಲಿ ಕಾಸೋಣಾಂದ್ರೆ ಸಿಲಿಂಡರ್ ಬೆಲೆ ಶಾಕ್ ಹೊಡೆಯುತ್ತೆ’ ನನ್ನವಳು ಅಲವತ್ತು
ಕೊಂಡಳು.

‘ಅದಕ್ಕೇ ಹೇಳೋದು, ಇಂಥದ್ದನ್ನೆಲ್ಲ ಸೀರಿಯಸ್ಸಾಗಿ ತೊಗೋಬಾರ್ದು. ನಮ್ಮ ರಾಜಕೀಯದವರ ಮಾತುಗಳ ಹಾಗೆ’ ನಾನೆಂದೆ. ಅಷ್ಟರಲ್ಲೇ ಕರೆಂಟ್ ಬಂದಿತ್ತು. ನಿಂತಿದ್ದ ಫ್ಯಾನ್ ಓಡತೊಡಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.