ADVERTISEMENT

ಚುರುಮುರಿ: ಸಿಗ್ನೇಚರ್ ಡಿಶ್

ಕೆ.ವಿ.ರಾಜಲಕ್ಷ್ಮಿ
Published 16 ಸೆಪ್ಟೆಂಬರ್ 2022, 19:31 IST
Last Updated 16 ಸೆಪ್ಟೆಂಬರ್ 2022, 19:31 IST
   

‘ಇನ್ನೇನು ಸಾಮ್ರಾಟ್ ಹೋಟೆಲ್ ಇರೋಲ್ಲ, ನಮ್ಮಪ್ಪನಿಗೆ ವಿಧಾನಸೌಧದಲ್ಲಿ ಕೆಲಸ ಇದ್ದಾಗ ಒಂದೆರಡು ಬಾರಿ ಹೋಗಿದ್ದೀನಿ. ಕಬ್ಬನ್‌ಪಾರ್ಕ್ ತುಂಬಾ ಓಡಾಡಿಸಿ, ರವೆ ಇಡ್ಲಿ ಕೊಡಿಸುವಾಗ ಅದೆಷ್ಟು ಸಂಭ್ರಮ! ನಿಮ್ಮಪ್ಪನ್ನ ಕಟ್ಕೊಂಡ ಮೇಲೆ ಅವಕ್ಕೆಲ್ಲ ಅವಕಾಶವೇ ಇಲ್ಲ’ ನನ್ನವಳು ನನ್ನನ್ನೇ ಟಾರ್ಗೆಟ್ ಮಾಡಿದಳು.

‘ಹೌದಮ್ಮ, ನಾನೂ ಫ್ರೆಂಡ್ಸ್ ಜೊತೆ ಹೋಗಿದ್ದೀನಿ, ಜಾಮೂನು ಸೂಪರ್. ಇವೆಲ್ಲ ಆ ಹೋಟೆಲಿನ ಸಿಗ್ನೇಚರ್ ಡಿಶ್‌ಗಳು’.

‘ಸಿಗ್ನೇಚರ್ ಅಂದ್ರೇನು, ಸಹಿ ಹಾಕ್ತಾರಾ?’ ಅತ್ತೆಯ ಸಂಶಯಕ್ಕೆ ನಗು ಬಂದರೂ ಸಹಿಸಿಕೊಂಡೆ, ಮುಂದಿನ ಪರಿಣಾಮ ನೆನೆದು.

ADVERTISEMENT

‘ಹಾಗಲ್ಲ, ಹೋಟೆಲ್‌ಗೆ ಐಡೆಂಟಿಟಿ ಕೊಡು ವಂಥ ತಿನಿಸು, ಅಷ್ಟು ಸ್ವಾದಿಷ್ಟ... ಹೋಟೆಲ್ ಇಲ್ಲದಿದ್ರೂ ಚಾಲುಕ್ಯ ಸರ್ಕಲ್ ಅನ್ನೋದು ಹಾಗೇ ಉಳಿಯುತ್ತೆ’ ಪುಟ್ಟಿಯ ವಿವರಣೆ.

‘ನಿಜ, ನಮಗೆ ಅದೇ ರೂಢಿಯಾಗಿರುತ್ತಲ್ಲ? ಈಗ ಮೈಸೂರು ಬ್ಯಾಂಕ್ ಹೆಸರು ಬದಲಾಗಿದ್ರೂ ಮೈಸೂರ್ ಬ್ಯಾಂಕ್ ಸರ್ಕಲ್ ಅಂತಲೇ ಹೇಳ್ತೀವಿ. ಥಿಯೇಟರ್‌ಗಳೆಲ್ಲ ಮಾಲೋ ಮತ್ತೊಂದೋ ಆಗಿದ್ರೂ ಅದೇ ಹೆಸರಲ್ಲೇ ಆ ಪ್ರದೇಶವನ್ನ ಗುರುತಿಸ್ತೀವಿ’ ನಾನೂ ದನಿಗೂಡಿಸಿದೆ.

‘ಅಲ್ವೇ ಮತ್ತೆ? ಪಂಪ ಮಹಾಕವಿ ರಸ್ತೆ ಅನ್ನೋದರಲ್ಲೇ ಸಾಹಿತ್ಯದ ಪರಿಮಳವಿದೆ. ಅದನ್ನು ಮತ್ಯಾಕೆ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತ ಬದಲಾಯಿಸೋಕೆ ಹೊರಟಿದ್ರೋ ಅರ್ಥವಾಗಲಿಲ್ಲ’ ಅತ್ತೆಯ ಮಾತು ಲಾಜಿಕಲ್ ಅನ್ನಿಸಿತು.

‘ಗಾಣಗಾಪುರದ ಹತ್ತಿರ ಸೇತುವೆ ಜಲಾವೃತವಾಗಿದ್ದರೂ ಒಂದು ಟ್ರಕ್ ಎಷ್ಟು ಸ್ಪೀಡ್ ಆಗಿ ಸ್ಕಿಡ್ ಆಗ್ದೇ ಬಂತು ಗೊತ್ತಾ’ ಪುಟ್ಟಿ ಕಣ್ಣರಳಿಸಿದಳು.

‘ಗುಂಡಿ ರಸ್ತೆಗಳನ್ನೇ ಜೀರ್ಣಿಸಿಕೊಂಡು ನಡೀತಿರೋರು ನಾವು, ಇವೆಲ್ಲ ಏನು ಮಹಾ?’ ನನ್ನವಳು ಮೊಟಕಿದಳು.

ಅಷ್ಟರಲ್ಲಿ ಕಂಠಿಯ ಫೋನ್. ಸ್ಪೀಕರ್ ಆನ್ ಮಾಡಿದೆ. ‘ಬಾಸ್‌ನ ಪೇರೆಂಟ್ಸ್‌ಗೆ ಸಾಮ್ರಾಟ್‌ನಲ್ಲಿ ದೋಸೆ ತಿನ್ನೋ ಆಸೆ. ನಾನೂ, ಶ್ರೀಮತಿ ಜಾಯಿನ್ ಆಗ್ತಿದ್ದೀವಿ, ನೀವೂ ಬರೋದಿದ್ರೆ ಪಿಕ್ ಮಾಡ್ತೀನಿ’ ಎಂದ.

‘ನಾನೂ, ನಮ್ಮಮ್ಮ ಗ್ಯಾರಂಟಿ’ ನನಗಿಂತ ಮೊದಲೇ ನನ್ನವಳು ಉತ್ತರಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.