ADVERTISEMENT

ಚುರುಮುರಿ| ತಲೆ ಪುರಾಣ!

ಬಿ.ಎನ್.ಮಲ್ಲೇಶ್
Published 1 ಡಿಸೆಂಬರ್ 2022, 19:31 IST
Last Updated 1 ಡಿಸೆಂಬರ್ 2022, 19:31 IST
Churumuri==02122022
Churumuri==02122022   

‘ಲೇ ಗುಡ್ಡೆ, ಕೊರೊನಾ ಹಾವಳಿ ಇನ್ನೂ ಮುಗಿದಿಲ್ಲ, ಆಗ್ಲೇ ಅದ್ಯಾವುದೋ ದೇಶದಾಗೆ ವಿಜ್ಞಾನಿಗಳು ಸಾವಿರಾರು ವರ್ಷದ ವೈರಸ್‌ಗಳಿಗೆ ಮತ್ತೆ ಜೀವ ಕೊಟ್ಟಾರಂತೆ. ಅವರಿಗೇನು ತೆಲಿಗಿಲಿ ಐತಿಲ್ಲಲೆ?’ ತೆಪರೇಸಿಗೆ ಕೋಪ ನೆತ್ತಿಗೇರಿತ್ತು.

‘ಸ್ವಲ್ಪ ತಡಿ, ಅವರಿಗೆ ತೆಲಿ ಐತೋ ಇಲ್ಲೋ, ಆದ್ರೆ ತೆಲಿಗಳ ಬಗ್ಗೆ ಈಗ ಜೋರಾಗಿ ಮಾತಾಡಂಗಿಲ್ಲ. ದೇಶದಾಗೀಗ ತೆಲಿಗಳ ಗದ್ಲ ನಡೆದೈತಿ’ ಗುಡ್ಡೆ ನಕ್ಕ.

‘ಹೌದಲ್ಲಲೆ, ರಾವಣನಿಗೆ ನೂರು ತೆಲಿನಾ? ಹತ್ತಲ್ವಾ?’ ಕೊಟ್ರೇಶಿಗೆ ಅನುಮಾನ.

ADVERTISEMENT

‘ಅಪ್ಪ ಮಾರಾಯ, ಮಾತಿನ ಭರದಾಗೆ ಒಂದು ಸೊನ್ನಿ ಜಾಸ್ತಿ ಹೇಳಿರ್ತಾರೆ, ಅದಕ್ಯಾಕ್ ಅಷ್ಟ್ ತೆಲಿ ಕೆಡಿಸ್ಕಂತಿ?’ ಚಾದಂಗಡಿ ಮಂಜಮ್ಮಗೂ ನಗು.

‘ಮಂಜಮ್ಮ, ಈ ದೇಶ ನಿಂತಿರೋದೇ ಸೊನ್ನಿ ಮ್ಯಾಲೆ. ಈಗ ನಿನ್ ಜುಜುಬಿ ಚಾಗೆ ಇಪ್ಪತ್ ರೂಪಾಯಿ, ಸೊನ್ನಿ ಬಿಟ್ಟು ಕೊಟ್ರೆ ರೊಕ್ಕ ಇಸ್ಕಂತಿಯೇನು?’ ಕೊಟ್ರೇಶಿ ತಿರುಗೇಟು ಕೊಟ್ಟ.

‘ನಿಂದೂ ಭಾರಿ ತೆಲಿ ಬಿಡಲೆ, ಈಗ ನಂದೊಂದ್ ಪ್ರಶ್ನಿ, ರಾವಣನಿಗ್ಯಾಕೆ ಹತ್ತು ತೆಲಿ?’ ತೆಪರೇಸಿ ಕೇಳಿದ.

‘ಅದು ಅವನಿಷ್ಟ, ನಿಂಗ್ಯಾಕೆ?’

‘ಆತುಬಿಡಪ, ನಿನ್ನ ಕೇಳಿದ್ನಲ್ಲ, ನಂಗೆ ತೆಲಿ ಇಲ್ಲ’.

‘ಲೇ ತೆಪರ, ರಾವಣನಿಗೆ ಹತ್ತು ತೆಲಿ ಆದ್ರೆ ನಮ್ಮ ರಾಜಕಾರಣಿಗಳಿಗೆ ನೂರೆಂಟು ತೆಲಿ. ಅಂದ್ರೆ ಅವರು ಅಷ್ಟು ಬುದ್ಧಿವಂತರು ಅಂತ...’ ಗುಡ್ಡೆ ಬಿಡಿಸಿ ಹೇಳಿದ.

‘ಕರೆಕ್ಟ್, ಅದೇ ತರ ನಮ್ ತೆಪರೇಸಿಗೆ ಎರಡು ತೆಲಿ, ಅವ್ನೂ ಭಾರಿ ಬುದ್ಧಿವಂತ’ ದುಬ್ಬೀರ ನಕ್ಕ.

ತೆಪರೇಸಿಗೆ ಸಿಟ್ಟು ಬಂತು ‘ನಂಗೆ ಎರಡು ತೆಲಿನಾ? ನಿಂಗೆ ತೆಲೀನೇ ಇಲ್ಲ’ ಎಂದ.

‘ಆತಪ, ನಂಗೆ ತೆಲಿ ಇಲ್ಲ. ಇವತ್ತು ಬದುಕೋಕೆ ತೆಲಿ ಬೇಕಿಲ್ಲ...’

‘ಮತ್ತೇನ್ ಬೇಕು?’

‘ದುಡ್ಡು ಬೇಕು, ಕೊಡ್ತೀಯಾ? ಇವತ್ತು ತೆಲಿ ಇಲ್ಲದೆ ಬದುಕಬಹುದು, ದುಡ್ಡಿಲ್ಲದೆ ಬದುಕೋಕಾಗಲ್ಲ’.

ದುಬ್ಬೀರನ ಮಾತಿಗೆ ತೆಪರೇಸಿ ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.