ADVERTISEMENT

ಚುರುಮುರಿ: ಅಯ್ಯೋ ನಂದಿನಿ!

ಮಣ್ಣೆ ರಾಜು
Published 3 ಜನವರಿ 2023, 19:45 IST
Last Updated 3 ಜನವರಿ 2023, 19:45 IST
   

‘ಗುಜರಾತಿ ಅಮುಲ್ ಜೊತೆ ಕನ್ನಡತಿ ನಂದಿನಿಯ ಸಂಬಂಧ ಬೆಳೆಸಲು ಅಮಿತ್ ಶಾ ಆಸೆಪಟ್ಟಿದ್ದಾರೆ ಕಣ್ರೀ…’ ಅಂದಳು ಸುಮಿ.

‘ನಂದಿನಿ ವೆಡ್ಸ್ ಅಮುಲ್ ಅನ್ನುವಂಥಾ ಸಂಬಂಧವಂತಾ?...’

‘ಗೊತ್ತಿಲ್ಲ. ಹಾಯದ, ಒದೆಯದ ಅಚ್ಚಗನ್ನಡತಿ ನಂದಿನಿಗೆ ಉತ್ತರ ಭಾರತದ ಭಾಷೆ, ಬದುಕು ಕಷ್ಟ ಆಗೋದಿಲ್ವೆ? ಬಡ ರೈತನ ಮನೆ ಮಗಳು ನಂದಿನಿ, ಅಲ್ಲಿನ ಹಣವಂತರ ಜೊತೆ ಹೆಣಗುವುದು ಕಷ್ಟವೇ ಆಗುತ್ತದೆ...’

ADVERTISEMENT

‘ನಂದಿನಿ ಹಾಲಿಗೆ ಗುಜರಾತಿ ಹುಳಿ ಹಿಂಡುವ ಪ್ರಯತ್ನ ಎಂಬುದು ವಿರೋಧಿಗಳ ಅಂಬೋಣ. ಅಂಥದ್ದೇನೂ ಇಲ್ಲ ಎಂಬುದು ಆಳುವವರ ಸಮರ್ಥನೆ...’

‘ಸಂಬಂಧ ಕೂಡಿಬಂದರೆ... ಲೋಕಲ್ ಇಂಡಿ ತಿನ್ನುವ ನಂದಿನಿಗೆ ಹೆಲ್ದಿ ತಿಂಡಿ ತಿನ್ನಿಸಿ ಹಾಲು ಹಿಂಡಿ ಕ್ಷೀರ ಕ್ರಾಂತಿ ಮಾಡ್ತಾರಂತೆ.
ಹೈನುಗಾರಿಕೆಯನ್ನು ಅಧಿಕ ಲಾಭ ತರುವ ಗೆಯ್ನುಗಾರಿಕೆ ಮಾಡ್ತಾರಂತೆ...’

‘ಗುಡಿ ಕೈಗಾರಿಕೆಯಂತೆ ಬಡವರ ಕುಟುಂಬ ಕಾಪಾಡುತ್ತಿರುವ ಹೈನುಗಾರಿಕೆಯನ್ನು ದೊಡ್ಡ ಕೈಗಾರಿಕೆ ಮಾಡಿ ನಂದಿನಿಯನ್ನು ಹಾಲು ಹಿಂಡುವ ಯಂತ್ರ ಮಾಡಿಬಿಡುತ್ತಾರೆ. ನಂದಿನಿ ನಂಬಿ ಬದುಕು ಕಟ್ಟಿಕೊಂಡಿರುವ ಬಡವರು, ತಮ್ಮ ಮಕ್ಕಳ ಹಾಲಿಗೂ ಅಮುಲ್ ಎದುರು ಕೈಕಟ್ಟಿ ನಿಲ್ಲುವಂಥ ಸ್ಥಿತಿ ಬೇಡ...’.

‘ಒಂದು ದೇಶ, ಒಂದು ಬದುಕು ಇದ್ದರೆ ದೇಶ ಸದೃಢವಾಗುವುದಂತೆ. ಪ್ರಾದೇಶಿಕ ಕಲೆ, ಕಸುಬು, ಭಾಷೆ, ಭಾವನೆಗಳನ್ನು ಒಂದುಗೂಡಿಸಿ ಏಕದೇಶಿಕ ಮಾಡಿದರೆ ಭಾವೈಕ್ಯದ ಭಾರತ ನಿರ್ಮಾಣ ಮಾಡಬಹುದಂತೇರೀ...’ ಅಂದಳು ಸುಮಿ.

‘ಹೀಗೇ ಹೇಳಿ ಲೋಕಲ್ ಬ್ಯಾಂಕ್‍ಗಳನ್ನು ದೊಡ್ಡ ಬ್ಯಾಂಕ್‍ಗಳ ಜೊತೆ ವಿಲೀನಗೊಳಿಸಿ ಅವು ಹೇಳ ಹೆಸರಿಲ್ಲದಂತಾಗಿವೆ. ಏಕತೆ, ಸಮಗ್ರತೆಯ ಕಳಕಳಿ ಇದ್ದರೆ ಮೊದಲು ಗಂಗಾ ನದಿಯನ್ನು ಕೃಷ್ಣೆ, ಕಾವೇರಿಯಲ್ಲಿ ವಿಲೀನಗೊಳಿಸಲಿ...’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.