ADVERTISEMENT

ಚುರುಮುರಿ: ಪೆಟ್ರೋಲ್ ಪ್ರಸಾದ

ಮಣ್ಣೆ ರಾಜು
Published 5 ಏಪ್ರಿಲ್ 2022, 19:30 IST
Last Updated 5 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಪೆಟ್ರೋಲ್ ರೇಟು ಇವತ್ತು ಎಷ್ಟು ಹೆಚ್ಚಾಗಿದೆ?’ ಬಂಕ್‍ನವನಿಗೆ ಶಂಕ್ರಿ ಕೇಳಿದ.

‘ಜಾಸ್ತಿಯಿಲ್ಲಾ ಸಾರ್, ಎರಡೇ ರೂಪಾಯಿ ಹೆಚ್ಚಾಗಿದೆ’ ಎಂದ.

‘ದಿನಾ ನಿಮ್ಮ ಬಂಕಿನಲ್ಲೇ ಪೆಟ್ರೋಲ್ ಹಾಕಿಸಿಕೊಳ್ತೀವಿ, ನಮಗೆ ಡಿಸ್ಕೌಂಟ್ ಕೊಡಿ’ ಸುಮಿ ಕೇಳಿಕೊಂಡಳು.

ADVERTISEMENT

‘ಚೌಕಾಸಿ ಮಾಡಲು ಇದೇನು ತರಕಾರಿ ಅಂಗಡಿನಾ ಮೇಡಂ?...’ ಬಂಕಿನವ ನಕ್ಕ.

‘ಗಾಳಿ, ನೀರು, ಪೆಟ್ರೋಲ್ ಇಲ್ಲದೆ ಮನುಷ್ಯರು ಬದುಕಲಾಗೊಲ್ಲ...’ ಅಂದ
ಶಂಕ್ರಿ.

‘ಗಾಳಿ, ನೀರು, ಪೆಟ್ರೋಲ್ ಪ್ರಕೃತಿಯ ಕೊಡುಗೆ ಕಣ್ರೀ, ಬಾವಿ ತೋಡಿದರೆ ಪೆಟ್ರೋಲ್ ಸಿಗುತ್ತೆ, ಅದಕ್ಕೆ ಇಷ್ಟೊಂದು ರೇಟಾ?’ ಎಂದಳು ಸುಮಿ.

‘ನೀವೂ ಬಾವಿ ತೋಡಿ ಪೆಟ್ರೋಲ್ ತೆಗೆದು ಬಳಸಿಕೊಳ್ಳಿ, ಯಾರು ಬೇಡಾಂತಾರೆ?’

‘ನಮ್ಮ ಜಾಗದಲ್ಲಿ ಬಾವಿ ತೋಡಿದರೆ ನೀರು ಸಿಗೋದೂ ಕಷ್ಟ’ ಅಂದ ಶಂಕ್ರಿ.

‘ಶ್ರೀಲಂಕಾದಲ್ಲಿ ದುಡ್ಡು ಕೊಟ್ರೂ ಪೆಟ್ರೋಲ್ ಸಿಗ್ತಿಲ್ಲವಂತೆ. ಭಗವಂತನ ಕೃಪೆಯಿಂದ ನಮ್ಮಲ್ಲಿ ಸಿಗ್ತಿದೆ. ಪೆಟ್ರೋಲನ್ನು ದೇವರ ಪ್ರಸಾದ ಅಂದುಕೊಳ್ಳಿ ಸಾರ್’ ಬಂಕಿನವ ಬುದ್ಧಿ ಹೇಳಿದ.

‘ನಮ್ಮ ಬದುಕಿನ ಬಂಡಿ ಚಲಿಸಬೇಕೆಂದರೆ ಬೈಕಿಗೆ ಪೆಟ್ರೋಲ್ ಹಾಕಿಸಲೇಬೇಕು’.

‘ಹೌದು, ನೀವು ಪೆಟ್ರೋಲಿಗೆ ಕೊಡುವ ಹೆಚ್ಚುವರಿ ಹಣದಿಂದ ನಮ್ಮ ಸರ್ಕಾರವೂ ನಡೆಯಬೇಕು. ಸಂಸಾರ, ಸರ್ಕಾರ ಎರಡೂ ಪೆಟ್ರೋಲನ್ನು ಅವಲಂಬಿಸಿವೆ ಅನಿಸೋದಿಲ್ವೇ? ಇಂತಹ ಪವಿತ್ರ ಪೆಟ್ರೋಲಿಗೆ ಬೆಲೆ ಕಟ್ಟಬಾರದು ಅಲ್ವಾ ಸಾರ್?’ ಅಂದ.

‘ಹೌದು, ಪೆಟ್ರೋಲ್ ರೇಟ್ ಜಾಸ್ತಿಯಾಯ್ತು ಅಂತ ಹೆದರಿ ಬೈಕ್ ಮಾರಿ ಸೈಕಲ್‍ನಲ್ಲಿ ಓಡಾಡಲಾಗುತ್ತಾ?’ ಎಂದಳು ಸುಮಿ.

‘ಸೈಕಲ್ ತುಳಿದು ಬೆವರು ಹರಿಸುವ ಬದಲು, ಅಷ್ಟೇ ಬೆವರು ಹರಿಸಿ ಹೆಚ್ಚು ದುಡಿದು ಪೆಟ್ರೋಲ್ ಖರೀದಿ ಮಾಡಿದರೆ ಸುಖವಾಗಿ ಬಾಳಬಹುದು ಸಾರ್...’ ಬಂಕಿನವ ಹೇಳಿದ.

ಶಂಕ್ರಿ, ಸುಮಿ ಮರು ಮಾತನಾಡದೆ ಬೈಕಿಗೆ ಪೆಟ್ರೋಲ್ ತುಂಬಿಸಿಕೊಂಡು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.