ADVERTISEMENT

ಚುರುಮುರಿ: ಚೀತಾನ್ವೇಷಣೆ

ನಾರಾಯಣ ರಾಯಚೂರ್
Published 2 ಸೆಪ್ಟೆಂಬರ್ 2022, 19:32 IST
Last Updated 2 ಸೆಪ್ಟೆಂಬರ್ 2022, 19:32 IST
   

‘ರೀ, ಬೆಳಗಾವಿಯಿಂದ ಫ್ರೆಂಡ್ ಬಕುಳಾ ಫೋನ್ ಮಾಡಿದ್ಲು, ಅಲ್ಲಿ ಚಿರತೆ ಕಾಟ ಒಂದು ತಿಂಗಳಾದರೂ ನಿಂತಿಲ್ವಂತೆ. ಎಲ್ಲರೂ ಮನೆಬಾಗಲು ಹಾಕ್ಕೊಂಡು ಕೂತಿದಾರಂತೆ’.

‘ಆ ಚೀತಾ... ಇಂಗ್ಲೀಷೇ ಬರ್ತದೆ. ಆ ಚಿರತೆಯ ಇಂಚಿಂಚು ಮಾಹಿತಿ ಹೇಳ್ತೇನೆ ಕೇಳು. ಅರಣ್ಯ ಇಲಾಖೆ, ಪೊಲೀಸು, ಸಕ್ರೆಬೈಲಿನ ಆನೆ, ಜೆಸಿಬಿ ಏನೆಲ್ಲ ತಂದು ಬೆನ್ನಟ್ಟಿಕೊಂಡು ಹೋದರೂ ಕೈಗೆ ಸಿಗ್ತಾಯಿಲ್ಲವಂತೆ, ಸುತ್ತಲಿನ ಜಿಲ್ಲೆಗಳಲ್ಲೂ ಚಿರತೆ ಕಾಟವಂತೆ!’

‘ಅದರ ಕಷ್ಟ ಏನೋ? ಯಾರ ಜೊತೆ ಜಗಳ ಮಾಡಿಕೊಂಡು ‘ಕೆಟ್ಟು ಪಟ್ಟಣ ಸೇರು’ ಎಂಬಂತೆ ಇಲ್ಲಿಗೆ ಬಂದಿದೆಯೋ?’ ಮಡದಿಯ ಕಳಕಳಿ.

ADVERTISEMENT

‘ಅದು ಅದರ ಹೆಂಡ್ತಿ ಜೊತೆ ಜಗಳ ಮಾಡಿಕೊಂಡೇ ಬಂದಿರ್ಬೇಕು! ಅದು ಗಂಡು ಚಿರತೆಯಂತೆ- ಅರಣ್ಯ ಇಲಾಖೆಯವರು ಅದರ ಲಿಂಗ ಪತ್ತೆ ಮಾಡಿ ಹನಿಟ್ರ್ಯಾಪ್ ಮಾಡಲು ಸಿದ್ಧತೆ ನಡೆಸಿದಾರಂತೆ ಕಣೆ, ಅದರದೇ ಚಾನ್ಸು’.

‘ನಿಮಗಂತೂ ಎಲ್ಲದರಲ್ಲೂ ಮೋಜು-ಮಸ್ತಿ, ಅಲ್ಲಿ ಜನ ಒದ್ದಾಡ್ತಿದ್ದಾರೆ, ಅದೂ, ಗಾಲ್ಫ್ ಕ್ಲಬ್ ಗ್ರೌಂಡಲ್ಲಿ ಠಿಕಾಣಿ ಹೂಡಿದೆಯಂತ್ರೀ!’

‘ಹೋ! ಅದು ರಿಚ್ ಚೀತಾನೇ ಇರಬೇಕು. ಅದಕ್ಕೇ ಶ್ರೀಮಂತರ ಆಟದ ಮೈದಾನದಲ್ಲೇ ಆಟ ಆಡಸ್ತಿದೆ. ಆಗಲೇ 50 ಲಕ್ಷ ಖರ್ಚು ಮಾಡಿಸಿದೆಯಂತೆ!’

‘ಚಿರತೆ, ನೀನೇಕೆ ಕಾಡ ದಾರಿಯ ಮರೆತೆ?! ಅಂತ ಕವನ ಕಟ್ಟೋದು; ಅದರ ಚಿತ್ರ, ಆಧಾರ್‌ ಕಾರ್ಡ್ ಮಾಡಿ ಜಾಲತಾಣದಲ್ಲಿ ಹಾಕೋದು ನಡೆದಿದೆಯಂತೆ’.

‘ಆಧಾರ್‌ ಕಾರ್ಡ್ ಮಾಡಿದ್ಮೇಲೆ ಕುಲ ಗೋತ್ರಾನೂ ಜಾಲಾಡಿರಬೇಕು?’

‘ಹೌದ್ಹೌದು, ಫ್ರೆಂಡ್ ಹೇಳ್ತಿದ್ಲು- ಚಿರತೆ ಸಿಂಹ ರಾಶಿದಂತೆ!’

‘ಅದಕ್ಕೇ... ಆನೆ ತಂದಿರಬೇಕು ಹಿಡಿಯೋಕೆ, ಗಜಕೇಸರಿ ಯೋಗ!’

‘ಯೋಗಾನೊ, ರೋಗಾನೊ? ವೀರಪ್ಪನ್ ಹಿಡಿಯೋಕೂ ಇಷ್ಟು ಕಷ್ಟಪಟ್ಟಿರಲಿಲ್ಲವೇನೊ?’

‘ಬಡಪಾಯಿ ಚಿರತೆ ಏನ್ಮಾಡತ್ತೆ ಹೇಳು? ಅದು ವಾಸ ಮಾಡೋ ಕಾಡನ್ನ ನಾವು ಕಬಳಿಸ್ತಾಯಿದೀವಿ, ಬೆಟ್ಟ ಕೊರೀತಾಯಿದೀವಿ’.

‘ನೀವೀಗ ಕೊರಿಯೋದನ್ನ ನಿಲ್ಸಿ, ಸ್ನಾನಕ್ಕೇಳಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.