ADVERTISEMENT

ಚುರುಮುರಿ: ಫ್ಯಾಮಿಲಿ ಬಜೆಟ್!

ಗುರು ಪಿ.ಎಸ್‌
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
   

‘ರೀ... ರೀ...’ ಕೂಗಿದಳು ಹೆಂಡತಿ. 

‘ಯಾಕ್ ಅಷ್ಟು ಜೋರಾಗಿ ಕೂಗ್ತಿದೀಯ’ ಟೀ ಕುಡೀತಾ ಕೇಳ್ದೆ.

‘ನಮ್ ಫ್ಯಾಮಿಲಿ,‌ ನಿಮ್ ಫ್ಯಾಮಿಲಿ ಸೇರಿಸಿ, ಎರಡೂ ಕುಟುಂಬಗಳಿಗೆ ಒಂದ್ ಬಜೆಟ್ ಮಾಡಿದ್ರೆ ಹೇಗಿರುತ್ತೆ? ಹೇಗಿದ್ರೂ ಎಲ್ಲ ಒಂದೇ ಬಿಲ್ಡಿಂಗ್‌ನಲ್ಲಿದೀವಲ್ಲ’ ಬಜೆಟ್ ಕುರಿತ ಸುದ್ದಿ ಓದುತ್ತಾ ಐಡಿಯಾ ಹೊರಹಾಕಿದಳು ಪತ್ನಿ.

ADVERTISEMENT

‘ನಿಮ್ಮವರನ್ನೂ ಸೇರಿಸಿ ಬಜೆಟ್ ಮಾಡೋಕೆ ನಿಮ್ಮ ಫ್ಯಾಮಿಲಿಯವರೇನು ಕೋಟ್ಯಧೀಶರು ನೋಡು’ ಅಣಕಿಸಿದೆ.

‘ದೇಶಕ್ಕೇ ಆಗಲಿ, ಮನೆಗೇ ಆಗಲಿ ಒಂದು ಆರ್ಥಿಕ ಶಿಸ್ತು ಅನ್ನೋದು ಬೇಕು ರೀ... ಯೋಜನೆ ಇರಬೇಕು, ಭವಿಷ್ಯದ ಬಗ್ಗೆ ಕನಸಿರಬೇಕು’.

‘ಕೊರೀಬೇಡ ತಾಯಿ, ಅದೇನ್ ಮಾಡ್ತೀಯೋ ಮಾಡು’.

‘ಎಲ್ಲರೂ ಸ್ಯಾಲರಿ ನನ್ನ ಕೈಯಲ್ಲೇ ಕೊಡಬೇಕು. ಅದರಲ್ಲಿ ಯಾರಿಗೆಷ್ಟು ಹಂಚಬೇಕು, ಭವಿಷ್ಯಕ್ಕೆ ಏನು ಮಾಡಬೇಕು ಎಲ್ಲ ನಾನು ಪ್ಲ್ಯಾನ್ ಮಾಡ್ತೀನಿ’.

‘ಆಯ್ತು’ ಎಂದೆ. ಮೊದಲ ತಿಂಗಳಲ್ಲೇ ‘ಫ್ಯಾಮಿಲಿ ಬಜೆಟ್’ ಸಿದ್ಧವಾಯಿತು.

‘ಇದೇನೇ ಇದು, ನಿಮ್ಮ ಫ್ಯಾಮಿಲಿಯವರಿಗೇ ಹೆಚ್ಚು ದುಡ್ಡು ಕೊಟ್ಟಿದೀಯ?’ ಸಿಟ್ಟಿನಲ್ಲೇ ಕೇಳಿದೆ.

‘ರೀ ನಿಮ್ ಮನೆಯವರು 8 ಜ‌ನ ಇದೀರಿ, ನಮ್ ಫ್ಯಾಮಿಲಿಯಲ್ಲಿ 16 ಜ‌ನ ಇದಾರೆ. ಅವರಿಗೆ ಜಾಸ್ತಿ ಕೊಡೋದು ನ್ಯಾಯ ಅಲ್ವಾ?’

‘ಹಂಗಲ್ವೆ, ನಮ್ ಫ್ಯಾಮಿಲಿಯಲ್ಲಿ ಐದು ಜನ ದುಡೀತಾರೆ, ಎಲ್ಲರದೂ ಜಾಸ್ತಿ ಸ್ಯಾಲರಿ.‌ ಹೆಚ್ಚು ದುಡಿಯೋ ಕೆಳಗಡೆ ಮನೆಯವರಿಗೆ ಕಡಿಮೆ ದುಡ್ಡು ಕೊಟ್ಟು, ಕಡಿಮೆ ಸಂಪಾದನೆ ಮಾಡೋ ಮೇಲಿನ ಮನೆಯವರಿಗೆ ಜಾಸ್ತಿ ಕೊಟ್ಟಿದೀಯಲ್ಲ. ಇದು ಅನ್ಯಾಯ. ಅವರವರ ಸಂಪಾದನೆಗೆ ತಕ್ಕಂತೆ ಫಲ ಸಿಗಲಿ. ಇಲ್ಲದಿದ್ದರೆ ಬೇರೆ ಆಗೋಣ’.

‘ದುಡ್ಡಿಗಾಗಿ ಬೇರೆಯಾಗೋಣ ಅನ್ನೋ ನೀವು ಕುಟುಂಬ ದ್ರೋಹಿ ಕಣ್ರೀ’ ಬೈಯತೊಡಗಿದಳು ಹೆಂಡತಿ.

‘ಹೆಚ್ಚು ದುಡ್ಡು ಕೊಟ್ಟೂ ದ್ರೋಹಿ ಅನ್ನಿಸ್ಕೊಬೇಕಲ್ಲ, ನನ್ ಕರ್ಮ’ ಅಂದುಕೊಂಡು ಸಿಟ್ಟಿನಿಂದ ಹೊರಬಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.