ಚುರುಮುರಿ
‘ಏಯ್, ಬೆಳಬೆಳಿಗ್ಗೆ ಏನದು ತಾಯಿ ಮಗನ ಗದ್ಲ? ಇದೇನು ಮನೇನಾ ಲೋಕಸಭೇನಾ?’ ಸಿಟ್ಟಿನಿಂದಲೇ ಬೆಡ್ ರೂಂನಿಂದ ಆಚೆ ಬಂದೆ.
‘ನೋಡ್ರಿ ಇವ್ನು, ಓದ್ಕೋ ಅಂದ್ರೆ ಮೊಬೈಲ್ ನೋಡ್ತ ಕೂತಿದಾನೆ. ಈ ವರ್ಷ ಎಸ್ಸೆಸ್ಸೆಲ್ಸಿ ಬೇರೆ...’ ಮಡದಿಗೆ ಕೋಪ.
‘ಡೋಂಟ್ ವರಿ ಮಾಮ್, ನಿಂಗೇನು ಎಸ್ಸೆಸ್ಸೆಲ್ಸಿ ಪಾಸಾದ್ರೆ ಆತಿಲ್ಲೋ? ನೀನು ಸಿದ್ರಾಮಣ್ಣ ಶಾಸಕರಿಗೆ ಪಾಠ ಮಾಡಿದಂಗೆ ನಂಗೆ ಮಾಡಾಕೆ ಬರ್ಬೇಡ...’ ಮಗ ಗುರ್ ಅಂದ.
ಅಲೆ ಇವ್ನ, ಈಗ್ಲೇ ರಾಜಕೀಯ ಮಾತಾಡ್ತಾನಲ್ಲ ಅಂತ ನಂಗೆ ಗಾಬರಿ. ಆದ್ರೂ ಡಿಕೆಶಿ ತರ ಕೂಲಾಗಿ ‘ಅಮ್ಮ ಹೇಳಿದ್ರಲ್ಲಿ ಏನು ತಪ್ಪಿಲ್ಲ ಮಗಾ, ನೀನು ಮೊಬೈಲ್ ಬಿಟ್ಟು ಓದ್ಕಾ’ ಅಂದೆ.
‘ಅಲ್ಲೋ, ಸಿದ್ರಾಮಣ್ಣ ಎಷ್ಟ್ ಚೆನ್ನಾಗಿ ವ್ಯಾಕರಣ ಹೇಳ್ತಾರೆ. ಆಗಮಸಂಧಿ, ಲೋಪಸಂಧಿ ಇವೆಲ್ಲ ನಿಂಗೆ ಗೊತ್ತೇನೋ?’ ಮಡದಿ ಕೇಳಿದಳು.
‘ಗೊತ್ತು ಬಿಡಮ್ಮ, ಡಿಕೆಶಿ ಸಿ.ಎಂ ಆದ್ರೆ ಆಗಮಸಂಧಿ, ಸಿದ್ರಾಮಣ್ಣ ಸಾಹೇಬ್ರಿಗೆ ಅದು ಲೋಪಸಂಧಿ’ ಎಂದ ಮಗ.
‘ನೀನಿಂಗೆ ಬರೀ ಮೊಬೈಲ್ ನೋಡ್ತಿದ್ರೆ ಎಸ್ಸೆಸ್ಸೆಲ್ಸಿ ಹೆಂಗೆ ಪಾಸಾಗ್ತೀಯೋ? ಐಎಎಸ್ ಮಾಡಲ್ವೇನೋ?’
‘ಮಾಮ್, ಎಸ್ಸೆಸ್ಸೆಲ್ಸಿಲಿ 13 ಮಾರ್ಕ್ಸ್ ತಗಳ್ಳೋದು ದೊಡ್ಡ ವಿಷ್ಯಾನ? 20 ಹೆಂಗೂ ಅವ್ರೇ ಕೊಟ್ಟಿರ್ತಾರೆ, 33 ಬಂದ್ರೆ ಪಾಸಲ್ವಾ? ನಾನು ಐಎಎಸ್ ಮಾಡಲ್ಲ, ರಾಜಕಾರಣಿ, ಮಂತ್ರಿ ಆಗ್ತೀನಿ. ಐಎಎಸ್, ಐಪಿಎಸ್‌ಗಳು ನಂಗೇ ಸೆಲ್ಯೂಟ್ ಹೊಡೀತಾರೆ’.
ಮಗನ ಮಾತು ಕೇಳಿ ನಂಗೆ ಸಿಟ್ಟು ಬಂತು. ಜಮೀರ್ ಅಹ್ಮದ್ ತರ ‘ಥು ನಿನ್ ಜನ್ಮಕ್ಕೆ, ಹೋಗು...’ ಎಂದೆ.
ಮಡದಿ ನನ್ನ ಮುಖ ನೋಡುತ್ತ ‘ಏನ್ ಮಾಡ್ಲಿರೀ, ಮನೆಯಿಂದ ಹೊರಗಾಕ್ತೀನಿ ಅಂದ್ರೆ, ಯತ್ನಾಳ್ ಸಾಹೇಬ್ರ ತರ ‘ಹಾಕು, ಆಮೇಲೆ ನೀನೇ ವಾಪಸ್ ಕರೀತೀಯ ಅಂತಾನೆ’ ಎಂದಳು. ನಾನು ಪಿಟಿಕ್ಕನ್ನಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.