‘ಅಣೈ, ಪರಿಸರ ಯಂಗೆ ಬದಲಾಯ್ತದೆ ಅದಕ್ಕೆ ತಕ್ಕಂಗೆ ನಾವು ಜೀವನಶೈಲಿಯನ್ನ ಬದಲಾಯಿ ಸಿಗ್ಯಬಕು ಅಂತ ಪೇಪರಲ್ಲಿ ಬರೆದವ್ರೆ. ಆದ್ರೆ ಪ್ರವಾಹ, ಭೂಕುಸಿತ, ಮಳೆ ನಮ್ಮನ್ನ ರೋಸ್ತಾವಲ್ಲ’ ಚಂದ್ರು ಕ್ಯಾತೆ ತೆಗೆದ.
‘ಇವೆಲ್ಲಾ ಆ್ಯಕ್ಟ್ ಆಫ್ ಗಾಡ್ ಕನ್ರೋ. ಮನುಷ್ಯರ ಅಹಂಕಾರಕ್ಕೆ ದೇವರು ಹಾಕ್ತಿರೋ ಪೆನಾಲ್ಟಿ. ಅದಕ್ಕೆ ದಂಡ ತೆತ್ತ ಮೇಲೆ ನಮ್ಮ ಲೈಫ್‌ಸ್ಟೈಲ್ ಬದಲಾಗಬೇಕು’ ತುರೇಮಣೆ ಒಪ್ಪಿಕ್ಯಂದರು.
‘ಆ್ಯಕ್ಟ್ ಆಫ್ ಗಾಡ್‍ಗೆ ಪರಿಹಾರ ಇಲ್ಲ ದಿಟ. ದಿನಾ ಪೇಪರಲ್ಲಿ ಹಗರಣ, ಅಕ್ರಮ, ಆರೋಪ, ಅಪಘಾತ, ಪ್ರತಿಭಟನೆ, ಭ್ರಷ್ಟಾಚಾರದ ವರದಿಗಳೇ ಎದ್ದು ಕಾಣ್ತವೆ. ಇದುಕ್ಕೆ ಯಾರು ಕಾರಣ?’ ಅಂತ ಕೇಳಿದೆ.
‘ರಾಜಕೀಯದ ಫ್ರಾಡ್ ಜನರ ಮ್ಯಾಲೆ ಹೇರಿಕ್ಯಳದು ಹಿಂಗೀಯೆ, ತಿಳಕಳಿ!’ ತುರೇಮಣೆ ಒಳ ವಿಚಾರ ಕೆದಕಿದರು.
‘ಸಿಎಂ ಸಯಾಬ್ರು ‘ಅವರ ಕಾಲದಲ್ಲಿ ಕೋಟಿ ಕೋಟಿ ಹಗರಣ ಆಗಿರಲಿಲ್ವೇ? ನಮ್ಮವರು ಯಾರೂ ಯಾವ ಹಗರಣದಲ್ಲೂ ಇಲ್ಲ’ ಅಂತ ಬಾರಾನಮೂನೆ ಲೆಕ್ಕ ಕೊಡ್ತಾವ್ರಲ್ಲಾ ಇದನ್ನೆಲ್ಲಾ ಯಾಕೆ ತನಿಖೆ ಮಾಡಿಸಬಾರದು?’ ಅರಾಜಕೀಯ ಪ್ರಶ್ನೆ ಕೇಳಿದೆ.
‘ಇದು ನಿಂದಾಣಿಕೆ ರಾಜಕೀಯ ಕನೋ. ನಾಳೆ ಬಹುಮತ ಬರದೇ ಇದ್ರೆ ಇವರೆಲ್ಲಾ ಅವರ ಬಡ್ಡೇಗೆ ಹೋಗಿ ಹೊಂದಾಣಿಕೆ ಒಪ್ಪೀಳ್ಯ ಮಾಡಬೇಕಾಯ್ತದೆ. ಅದುಕ್ಕೆ ‘ನಾನು ಹೊಡೆದಂಗೆ ಮಾಡ್ತೀನಿ. ನೀನು ಅತ್ತಂಗೆ ಮಾಡು’ ಅಂತ ರಾಜಿಕಬೂಲು ಮಾಡಿಕ್ಯತ್ತರೆ!’ ತುರೇಮಣೆ ಸಿಡಿಗುಟ್ಟಿದರು.
‘ಇವರು ಹಿಂಗೆ ಮಾಡಿದ್ರೆ ಯಾವ ತನಿಖೇನೂ ಬರ್ಕತ್ತಾಗಲ್ಲ ಬುಡಿ. ನಮ್ಮ ಕತೆ ಯಂಗೆ?’ ಅಂತಂದೆ ಬೇಸರದಲ್ಲಿ.
‘ಇದೇ ಕನೋ ಆ್ಯಕ್ಟ್ ಆಫ್ ಫ್ರಾಡ್ ಅಂದ್ರೆ! ಫ್ರಾಡ್ ರಾಜಕಾರಣಿಗಳಿಗೆ ಮಾತ್ರ ಬರೋ ಜಡ್ಡು. ಇದರ ದುಷ್ಪರಿಣಾಮಕ್ಕೆ ನಾವು ಬಲಿಯಾಗದೇ ದಿನಕ್ಕೆ ಎರಡು ಬೂವಕ್ಕೆ ದಾರಿ ಮಾಡಿಕ್ಯಂಡ್ರೆ ಸಾಕು’.
ತುರೇಮಣೆ ಮಾತಿಗೆ ನಾವೆಲ್ಲರೂ ಕಿಸಕ್ಕನೆ ನಕ್ಕು ಎದ್ದೋದೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.