ಚುರುಮುರಿ
‘ವತ್ಸಲೆ ಸದಾ ನಮಸ್ತೆ...’ ಎನ್ನುತ್ತಾ ಒಳಬಂದ ಪಿಎ ಮುದ್ದಣ್ಣ.
‘ಆ ಗೀತೆಯನ್ನ ಯಾಕ್ ಉಲ್ಟಾ ಹೇಳ್ತಿದಿಯಾ, ಅದು ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಅಂತ, ಸರಿಯಾಗಿ ಹೇಳಬೇಕು ಅದನ್ನ’ ಗದರಿದರು ಮಿನಿಸ್ಟರ್ ವಿಜಿ.
‘ಮೊದಲು ನಾನದನ್ನ ಸರಿಯಾಗಿಯೇ ಹೇಳ್ತಿದ್ದೆ ಸಾರ್. ಆದರೆ, ಆ ಗೀತೆ ಹೇಳಿದ್ದಕ್ಕೆ ನೀವು ಸಾರಿ ಕೇಳಿದ್ರಲ್ಲ, ಅದಕ್ಕೆ ಉಲ್ಟಾ ಹೇಳಿದೆ. ಹೇಗಿದ್ದರೂ ಅರ್ಥದಲ್ಲೇನೂ ವ್ಯತ್ಯಾಸ ವಾಗಲ್ವಲ್ಲ ಸಾರ್’ ಎಂದ ಮುದ್ದಣ್ಣ.
‘ಇರಲಿ, ಇರಲಿ. ಲೆಕ್ಕಕ್ಕೇ ಇಲ್ಲದವರೆಲ್ಲ ನನ್ನನ್ನ ಅಣಕಿಸುವಂತಾಗಿದೆ. ಸಮಯ ಬಂದಾಗ ಒದ್ದು ಒಳಗೆ ಹಾಕಿಸೋದೆಲ್ಲ ಗೊತ್ತಿದೆ ನಂಗೆ’ ಗತ್ತಿನಲ್ಲಿ ಹೇಳಿದರು ಸಾಹೇಬ್ರು.
‘ಆದರೂ ಸರ್, ನೀವು ಸದನದಲ್ಲೇ ಆರ್‌ಎಸ್‌ಎಸ್ ಗೀತೆ ಹಾಡಿದಾಗ ನನ್ನ ಕಣ್ಣಿಗೆ ಹೇಗೆ ಕಾಣ್ತಿದ್ರಿ ಗೊತ್ತಾ?’
‘ಹೇಗೆ ಕಾಣ್ತಿದ್ದೆ?’
‘ನೋಟಿಸ್ ಪೀರಿಯಡ್‌ನಲ್ಲಿರೋ ಉದ್ಯೋಗಿ ಥರ’.
‘ಅಂದ್ರೆ?’
‘ಹೇಗಿದ್ರೂ ಹೊರಗೆ ಹೋಗ್ತೀನಿ, ಯಾವ ಮ್ಯಾನೇಜ್‌ಮೆಂಟ್ ಏನ್ ಮಾಡುತ್ತೆ, ಕಂಪನಿ ಪಾಲಿಸಿ ವಿರುದ್ಧ ಮಾತಾಡಿದರೂ ಏನಾಗೋದಿದೆ ಅನ್ನೋ ಥರ ಇರ್ತಾರಲ್ಲ, ಹಾಗೆ ಕಾಣ್ತಿದ್ರಿ’.
‘ಸುಮ್ನಿರಯ್ಯ ಸಾಕು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈಗ ನನ್ನನ್ನ ಟೀಕೆ ಮಾಡ್ತಿರೋರು ನಾನು ಈ ಪಕ್ಷಕ್ಕೆ ಕೊಟ್ಟಿರೋ ಕೊಡುಗೆಯಲ್ಲಿ 10 ಪರ್ಸೆಂಟ್ ಆದರೂ ಕೆಲಸ ಮಾಡಿದ್ದಾರಾ ಹೇಳು’.
‘ಆದರೂ ನೀವು ಲಕ್ಕಿ ಬಿಡಿ ಸಾರ್’.
‘ಹೇಗೆ?’
‘ಬೇರೆಯವರು ಪಾರ್ಟಿ ನಾಯಕರ ಅಭಿಪ್ರಾಯದ ವಿರುದ್ಧ ಸ್ಟೇಟ್‌ಮೆಂಟ್ ಕೊಟ್ಟರೆ ಅವರನ್ನ ಟರ್ಮಿನೇಟ್ ಮಾಡೇ ಬಿಟ್ಟರು. ನೀವು ಸದನದಲ್ಲೇ ಹಾಡು ಹೇಳಿದರೂ ಸುಮ್ಮನೆ ಬಿಟ್ಟಿದಾರಲ್ಲ...’
‘ಅದಕ್ಕೇ ಈಗ ಕ್ಷಮೆ ಕೇಳಿಲ್ವ ನಾನು’.
‘ಹಾಡಬೇಕಿತ್ತೇಕೆ? ಹಾಡಿದ ಮೇಲೆ ಕ್ಷಮೆ ಕೇಳಬೇಕಿತ್ತೇಕೆ?’
‘ಮುಂದೇನೇನಾಗುತ್ತೋ ಏನೋ… ಅದಕ್ಕೆ ಆಗಾಗ ಇಂತಹ ದಾಳ ಉದುರಿಸುತ್ತಿರಬೇಕು... ಇದೆಲ್ಲ ನಿನಗೆ ಗೊತ್ತಾಗಲ್ಲ ಸುಮ್ನಿರು’ ಕಣ್ಣು ಮಿಟುಕಿಸಿದರು ಸಾಹೇಬರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.