ADVERTISEMENT

ಚುರುಮುರಿ: ವಿಕಾಸಪಥ ಉದ್ಘಾಟನೆ

ಸುಮಂಗಲಾ
Published 5 ಡಿಸೆಂಬರ್ 2021, 19:45 IST
Last Updated 5 ಡಿಸೆಂಬರ್ 2021, 19:45 IST
   

‘ಮೂವತ್ತೆಂಟು ಸಾವಿರ ಕೋಟಿ ಅಂದರೆ 38ರ ಮುಂದೆ ಎಷ್ಟ್ ಸೊನ್ನೆ ಅಂತ ಗೊತೈತೇನ್ ನಿನಗ?’ ಬೆಕ್ಕಣ್ಣ ಕೇಳಿದಾಗ ಪೆಂಗಳಂತೆ ತಲೆ ಅಲ್ಲಾಡಿಸಿದೆ. ನನ್ನ ಅಜ್ಞಾನಕ್ಕೆ ಮರುಗಿದ ಬೆಕ್ಕಣ್ಣ ಮುಂದುವರಿಸಿತು.

‘ಮೋದಿಮಾಮಾ ಪ್ರಧಾನಿಯಾದ ಏಳೇ ವರ್ಸದಾಗೆ ನಾವು 38 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ರಕ್ಷಣಾ ಸಾಮಗ್ರಿ ಬ್ಯಾರೆ ದೇಶಕ್ಕೆ ರಫ್ತು ಮಾಡೀವಂತ ರಕ್ಷಣಾ ಸಚಿವರು ಹೇಳ್ಯಾರ. ಮೊದ್ಲೆಲ್ಲ ಉಗ್ರರು ಖುಲ್ಲಂಖುಲ್ಲ ಬಂದು ನಮ್ಮೋರಿನ್ನ ಹೊಡದು ಹೋಗ್ತಿದ್ದರು, ಆದರೆ ಮೋದಿಮಾಮಾ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮ್ಯಾಗೆ ಉಗ್ರರೆಲ್ಲ ನಡುಗಾಕ ಹತ್ಯಾರಂತ ಶಾಣ್ಯಾ ಅಂಕಲ್ ಹೇಳ್ಯಾರ. ಅಮೇಠಿವಳಗ ಮೂರು ದಶಕ ಕೈಪಕ್ಷದವರೇ ಸಂಸದರಾಗಿದ್ರೂ ಏನೂ ಮಾಡಿರಲಿಲ್ಲ. ಸ್ಮೃತಿ ಅಕ್ಕ ಅಲ್ಲಿ ಕಮಲದ ಹೂ ಅರಳಿಸಿದ್ದೇ ಎಷ್ಟಕೊಂದು ಅಭಿವೃದ್ಧಿ ಮಾಡ್ಯಾಳ. ಐದು ಲಕ್ಷ ಎ.ಕೆ. ರೈಫಲ್ ಉತ್ಪಾದನೆ ಮಾಡೂ ಕಾರ್ಖಾನೆ ಶುರು ಮಾಡ್ಯಾರೆ ಅಲ್ಲಿ. ಈ ಏಳು ವರ್ಸದಾಗೆ ಎಷ್ಟ್ ವಿಕಾಸ ಆಗೈತಿ, ಎಲ್ಲಾರಿಗಿ ಅಗದಿ ಭಯಂಕರ ರಕ್ಷಣೆ ದೊರೆಯಾಕೆ ಹತೈತಿ’ ಎಂದು ಹಾಡಿ ಹೊಗಳಿತು.

‘ಹೌದೌದು... ಎಲ್ಲಾರಿಗೂ ರಕ್ಷಣೆ ಸಿಗತೈತಿ. ಅತ್ತ್ ಕಡಿಗಿ ನಿನ್ನ ಮಲ್ಯಮಾಮಾ, ನೀರವ್ ಮೋದಿ ಅಂಕಲ್ಲು ಬ್ಯಾರೆ ದೇಶದಾಗೆ ತೆಲಿಮರೆಸಿಕಂಡು ಮಜಾ ಮಾಡಾಕೆ ಹತ್ಯಾರ. ಇತ್ ಕಡಿಗಿ ನುಂಗಣ್ಣಗಳು ಎಲ್ಲಾದ್ರಾಗೆ ನುಂಗತಾನೆ ಅದಾರ. ಕರುನಾಡೊಳಗೆ ಕಾಂಟ್ರಾಕ್ಟ್ ಮಾಡೂದೆ ಕಷ್ಟ ಅಂತ ಗುತ್ತಿಗೆದಾರರು ಮೋದಿಮಾಮಂಗೆ ನೇರ ಪತ್ರಾ ಬರದಾರೆ. ಉತ್ತರಪ್ರದೇಶದ ಬಿಜನೂರಿನಾಗೆ ಒಂದು ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಾಡೂಮುಂದ ತೆಂಗಿನಕಾಯಿ ರಸ್ತೆಗೆ ಕುಟ್ಟಿದರಂತ. ತೆಂಗಿನಕಾಯಿ ವಡೀಲಿಲ್ಲಂತ, ಆದರೆ ಹೊಸಾ ರಸ್ತೆನೇ ಬಿರುಕು ಬಿಟ್ಟಿತಂತ’ ನಾನು ರೇಗಿದೆ.

ADVERTISEMENT

‘ರಸ್ತೆ ಇರದು ಅಡ್ಡಾಡಕೆ, ತೆಂಗಿನಕಾಯಿ ವಡಿಯಾಕೆ ಅಲ್ಲ. ಇನ್‌ಮ್ಯಾಗೆ ವಿಕಾಸಪಥಗಳ ಉದ್ಘಾಟನೆಗೆ ಬರೀ ನಿಂಬಿಕಾಯಿ ಇಡ್ರಿ ಅಂತ ನಿಯಮ ಮಾಡಬೇಕು’ ಎಂದು ಬೆಕ್ಕಣ್ಣ ಉಡಾಫೆಯಿಂದ ಹೇಳಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.