ADVERTISEMENT

ಚುರುಮುರಿ: ವೈರೀಸ್ ವೈರಾಣು

ಮಣ್ಣೆ ರಾಜು
Published 26 ಫೆಬ್ರುವರಿ 2021, 20:30 IST
Last Updated 26 ಫೆಬ್ರುವರಿ 2021, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಪಕ್ಕದ ಮನೆ ಡಾಕ್ಟರ್ ಕೋವಿಡ್ ಲಸಿಕೆ ಚುಚ್ಚಿಸಿಕೊಂಡು ಆರೋಗ್ಯವಾಗಿದ್ದಾರೆ. ಅವರ ಹೆಂಡ್ತಿ ಆನಂದವಾಗಿದ್ದಾರೆ ಕಣ್ರೀ...’ ಅಂದಳು ಸುಮಿ.

‘ಹೋಗ್ಲಿಬಿಡು, ಡಾಕ್ಟರ್ ಆರೋಗ್ಯವಾಗಿದ್ದರೆ ಜನಸಾಮಾನ್ಯರೂ ಆರೋಗ್ಯವಾಗಿರ್ತಾರೆ’ ಎಂದ ಶಂಕ್ರಿ.

‘ವೈರಸ್ ವೈರಿ ದಾಳಿ ಮಾಡಬಾರದು ಅಂತ ನಾವು ಕೋಟೆ ಕಟ್ಟಿದಂತೆ ಮಾಸ್ಕ್ ಕಟ್ಟಿಕೊಂಡು, ಪಿಪಿಇ ಕಿಟ್ ತೊಟ್ಟುಕೊಂಡರೂ ಅದರ ಕಾಟ ತಪ್ಪಲಿಲ್ಲ, ಯುದ್ಧ ಸಾರಿ ಕೊರೊನಾ ವಂಶ ಧ್ವಂಸ ಮಾಡಬೇಕು’.

ADVERTISEMENT

‘ಆಗುತ್ತೆಬಿಡು, ನಮಗೆ ಯುದ್ಧ ಹೊಸದಲ್ಲ. ಹಿಂದಿನ ಅದೆಷ್ಟೋ ರಾಜಮಹಾರಾಜರು ಯುದ್ಧ ಗೆದ್ದು ಸಾಮ್ರಾಜ್ಯ ಸ್ಥಾಪಿಸಿದ ಇತಿಹಾಸ ನಮ್ಮದು’.

‘ನಿಜ, ಇತಿಹಾಸದ ಪುಟ ತೆರೆದರೆ ಪುಟಪುಟದಲ್ಲೂ ರಕ್ತದ ಕಲೆ. ದೇಶದ ಯುದ್ಧ ಭೂಮಿಗಳಲ್ಲಿ ಕೋಡಿ ಹರಿದ ಸೈನಿಕರ ರಕ್ತ ಲೆಕ್ಕಹಾಕಿದರೆ ಕಾವೇರಿ ಗಾತ್ರದ ರಕ್ತದ ನದಿಯಾಗುತ್ತಿತ್ತೇನೋ, ಎಲ್ಲಾ ರಕ್ತ ಸಂಗ್ರಹಿಸಿದ್ದರೆ ಪೆಟ್ರೋಲ್ ಬಂಕ್ ಥರಾ ಊರೂರಲ್ಲೂ ಬ್ಲಡ್ ಬ್ಯಾಂಕ್ ಸ್ಥಾಪಿಸಬಹುದಿತ್ತು’ ಎಂದಳು ಸುಮಿ.

‘ಹೌದು, ಯುದ್ಧವೆಂದರೆ ರಕ್ತ, ಬೆವರು ಹರಿಸಲೇಬೇಕು’.

‘ಇವತ್ತಿಗೂ ಯುದ್ಧ ತಪ್ಪಿಲ್ಲ, ಶತ್ರುಗಳು, ಆಯುಧಗಳ ಸ್ವರೂಪ ಬದಲಾಗಿದೆ ಅಷ್ಟೇ’.

‘ಪುಟ ತಿರುಗಿಸಿ ನೋಡಿದರೆ, ನಾವು ಅಭಿವೃದ್ಧಿಗಿಂತ ಶತ್ರು ಸಂಹಾರಕ್ಕೆ ಸಂಪತ್ತನ್ನು ಖರ್ಚು ಮಾಡಿದ್ದೇ ಜಾಸ್ತಿ. ಈಗಲೂ ಅಷ್ಟೇ, ಖಜಾನೆ ಹಣವನ್ನು ಶತ್ರು ಕೊರೊನಾ ನುಂಗಿ
ಬಿಟ್ಟಿದೆಯಂತೆ’.

‘ಈಗಲಾದರೂ ವ್ಯಾಕ್ಸಿನ್‍ನಿಂದ ವೈರಿ ವೈರಸ್ ದಮನ ಮಾಡಿ, ಅಭಿವೃದ್ಧಿಗೆ ಗಮನ ಕೊಡಬಹುದು’.

‘ಆದರೆ, ಮಾರಕ ರೋಗ ವೈರೀಸ್ ವೈರಾಣುಗೆ ವ್ಯಾಕ್ಸಿನ್ ಸಿಕ್ಕಿಲ್ಲವಲ್ಲ...’

‘ವೈರೀಸ್ ವೈರಾಣುನಾ?’

‘ಆಡಳಿತವನ್ನು ಅಧ್ವಾನಗೆಡಿಸುತ್ತಿರುವ ಲೋಕಲ್ ರೋಗ, ವಿರೋಧ ಪಕ್ಷದವರ ಟೀಕೆ, ಸ್ವಪಕ್ಷದವರ ತೀಟೆ ಎಂಬ ವ್ಯಾಕ್ಸಿನ್ ಇಲ್ಲದ ವೈರೀಸ್ ರೋಗಬಾಧೆಯಿಂದ ಆಡಳಿತ ಕಂಗೆಟ್ಟಿದೆಯಂತೆ...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.