ADVERTISEMENT

ಚುರುಮುರಿ | ವಸ್ತ್ರ ವೈರಸ್

ಮಣ್ಣೆ ರಾಜು
Published 15 ಫೆಬ್ರುವರಿ 2022, 20:30 IST
Last Updated 15 ಫೆಬ್ರುವರಿ 2022, 20:30 IST
   

‘ಸಾರ್, ಮಗಳು ಪಮ್ಮಿಯ ಆರೋಗ್ಯ ತಪಾಸಣೆ ಮಾಡಿ, ವಸ್ತ್ರ ವೈರಸ್ ಇದ್ದರೆ ಲಸಿಕೆ, ಚಿಕಿತ್ಸೆ ಕೊಡಿ...’ ಎಂದು ಶಂಕ್ರಿ, ಸುಮಿ ತಜ್ಞರಿಗೆ ಮನವಿ ಮಾಡಿದರು.

ಪಮ್ಮಿಯನ್ನು ತಪಾಸಣೆ ಮಾಡಿದ ತಜ್ಞರು, ‘ವಸ್ತ್ರ ವೈರಸ್ ಅಂಟಿಲ್ಲ, ಕಾಲೇಜಿನಲ್ಲಿ ಕಾಯಿಲೆ ತಡೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

‘ಈ ಕಾಯಿಲೆಗೂ ಮಾಸ್ಕ್ ಹಾಕಬೇಕಾ ಸಾರ್?’ ಸುಮಿ ಕೇಳಿದಳು.

ADVERTISEMENT

‘ಹೌದು, ಮೂಗು, ಬಾಯಿ ಜೊತೆಗೆ ಕಿವಿಗೂ ಮಾಸ್ಕ್ ಹಾಕಬೇಕು. ವಸ್ತ್ರ ವೈರಸ್ ಕಿವಿಯಿಂದ ಕಿವಿಗೆ ಬೇಗ ಹರಡುತ್ತದೆ’.

‘ಈ ಕಾಯಿಲೆ ಲಕ್ಷಣಗಳೇನು ಸಾರ್?’ ಶಂಕ್ರಿ ಕೇಳಿದ.

‘ಕಲರ್ ಬ್ಲೈಂಡ್‌ನೆಸ್‌, ಇಷ್ಟವಿಲ್ಲದ ಬಣ್ಣ ಕಂಡರೆ ಕಣ್ಣುರಿ, ಅಸಹಿಷ್ಣುತೆ, ಅಸಮಾನತೆ ರೀತಿಯ ಅವಲಕ್ಷಣಗಳೇ ಈ ರೋಗದ ಲಕ್ಷಣಗಳು’.

‘ಕಾಲೇಜಿನಲ್ಲಿ ಒಮ್ಮೊಮ್ಮೆ ನನಗೂ ಈ ರೀತಿ ಆಗುತ್ತಿತ್ತು ಸಾರ್’ ಅಂದಳು ಪಮ್ಮಿ.

‘ಸೋಂಕಿತರಿಂದ ಅಂತರ ಕಾಪಾಡಿಕೋ, ಅವರ ಬಣ್ಣದ ಮಾತುಗಳಿಗೆ ಮರುಳಾಗಬೇಡ, ಸೋಂಕು ಅಂಟಿಸಿಕೊಂಡರೆ ಹೋಂ ಕ್ವಾರಂಟೈನ್ ಮಾಡಿ ಆನ್‍ಲೈನ್ ಕ್ಲಾಸ್ ಮಾಡ್ತಾರೆ, ಹುಷಾರು!...’ ತಜ್ಞರು ಎಚ್ಚರಿಸಿದರು.

‘ಕಾಲೇಜಿಗೆ ಪೊಲೀಸ್ ಕಾವಲಿದೆ ಅಂತ ನೆಗ್ಲೆಕ್ಟ್ ಮಾಡ್ಬೇಡ, ವಿಕೃತ ವೈರಸ್‍ಗಳು ಹೇಗಾದ್ರೂ ನುಗ್ಗಿಬಿಡುತ್ತವೆ’ ಎಂದಳು ಸುಮಿ.

‘ಕೊರೊನಾ ಮೊದಲ ಅಲೆ ವಯೋವೃದ್ಧರನ್ನು ಬಾಧಿಸಿತ್ತು, ಮತ್ತೊಂದು ಅಲೆ ವಯಸ್ಕರನ್ನೂ ಕಾಡಿತ್ತು. ವಸ್ತ್ರ ವೈರಸ್ ಶಾಲಾಕಾಲೇಜು ಮಕ್ಕಳಿಗೆ ವಕ್ಕರಿಸಿಕೊಂಡಿದೆ. ಅದರಲ್ಲೂ, ವೋಟರ್ ಲಿಸ್ಟ್‌ಗೆ ಹೊಸದಾಗಿ ಸೇರಿರುವ, ಸೇರಲು ಸಮೀಪವಿರುವ ವಯಸ್ಸಿನವರನ್ನು ಇದು ಕಾಡುತ್ತಿದೆ’ ಶಂಕ್ರಿ ಸಂಕಟಪಟ್ಟ.

‘ಧೈರ್ಯವಾಗಿರಿ, ವಸ್ತ್ರ ವೈರಸ್ ಸೀಜನ್ ಕಾಯಿಲೆ, ಎಲೆಕ್ಷನ್ ಸೀಜನ್ ಮುಗಿದ ಮೇಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಪರಿಣತರು, ಪ್ರಾಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದಾರೆ...’ ಎಂದರು ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.