ADVERTISEMENT

ಚುರುಮುರಿ| ಹೆಂಡತೇರ ದಿನ!

​ಪ್ರಜಾವಾಣಿ ವಾರ್ತೆ
Published 13 ಮೇ 2020, 19:45 IST
Last Updated 13 ಮೇ 2020, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಉದ್ರಿ ದೋಸ್ತಿಗಳಾದ ಚಂಬಸ್ಯನೂ ರುದ್ರೇಶಿಯೂ ಬೀರೇದೇವರ ಗುಡಿ ಜಗುಲಿ ಮೇಲೆ ಹರಟೆ ಯಜ್ಞದಲ್ಲಿ ತೊಡಗಿದ್ದರು.

‘ಅಲ್ಕಣ್ಲೇ ಬಸ್ಸಿ, ಮೊನ್ನೆ ಅಮ್ಮಂದಿರ ದಿನಿತ್ತಲ್ಲ, ನಿಮ್ಮವ್ವಗ ಏನಾರೆ ಕೊಡಿಸಿದ್ಯೇನಲೇ?’ ಅಂತ ಕೇಳಿದ ರುದ್ರೇಶಿ.

ಅದಕ್ಕೆ ಚಂಬಸ್ಯ ‘ಇಲ್ಕಣ್ಲೇ, ನಾನ್ ಕೊಡಸ್ತನಿ ಅಂದ್ರೂ ನಮ್ಮವ್ವ ಒಲ್ಲೆ ಅಂತು. ಅವ್ವ ಇವತ್ತು ಅಮ್ಮಂದಿರ ದಿನವಂತೆ, ನಿಂಗೊಂದ್ ಸೀರಿ ತಂದು ಕೊಡತನಿ ಅಂದ್ರೆ ಅಕಿ, ಮೊನ್ನೆ ಕೊಟ್ಟೂರಜ್ಜನ್ ತೇರಿನ್ಯಾಗ್ ತಗೊಂಡಿದ್ದ ಹೊಸ ಸೀರಿ ಐತಲ್ಲ ಸಾಕು. ಕಾಡು ಬಾ ಅನ್ನೋ ಈ ಮುದುಕಿಗ್ ಯಾಕಪ್ಪಜ್ಜಿ ಸೀರಿ ಒಡವಿ... ಅಂತು. ಅದ್ಸರಿ ನಿಮ್ಮವ್ವಗ್ ನೀ ಏನ್ ಕೊಡಿಸ್ದಿಲೇ’ ಅಂದ.

ADVERTISEMENT

ಅದಕ್ಕೆ ರುದ್ರೇಶಿ, ‘ನಮ್ಮವ್ವನೂ ನಂಗೇನೂ ಬ್ಯಾಡ, ಬೇಕುದ್ರೆ ನಿನ್ ಎಂಡ್ರಿಗೆ ಕೊಡಿಸ್ಕ್ಯೊ ಅಂತ್ಕಣಲೇ’ ಅಂದ.

ಆಗ ಚಂಬಸ್ಯ, ‘ಈ ಅಮ್ಮಂದಿರ ದಿನ ಬಂದ್ರೆ ಗಂಡೈಕ್ಳುಗಳಿಗೆಲ್ಲ ನೆಮ್ಮದಿ ನೋಡು. ಯಾಕಂದ್ರೆ ತಾಯಿ ದೇವ್ರಿದ್ದಂಗೆ. ಅಕಿ ಯಾವತ್ತೂ ಮಗಂಗೆ ಅದು ಕೊಡಿಸು, ಇದು ಕೊಡಿಸು ಅಂತ ಕಾಡಿಸಲ್ಲ. ಆದ್ರೆ ಈ ಯೆಂಡತೇರ ದಿನ ಬಂದ್ರೆ ತೆಲಿ ಕೆಟ್ ಮೊಸರಾಕ್ಕತಿ. ವಾಲಿ ಬೇಕು, ಝುಮ್ಕಿ ಬೇಕು, ಸರ ಬೇಕು, ಸೀರಿ ಬೇಕು ಅಂತ ಒಂದೇ ಸಮ ಗಂಡುನ್ ಪ್ರಾಣ ತಿಂತಾವು. ಒಟ್ನ್ಯಾಗಿ ನಮ್ ರೊಕ್ಕೆಲ್ಲ ಚೌರ!’.

ಇದು ಕೇಳಿ ಎದೆ ಒಡೆದಂತಾದ ರುದ್ರೇಶಿ, ‘ಅಲ್ಲಲೇ ಯೆಂಡತೇರ ದಿನಾಂತನು ಒಂದ್ ಐತೇನ್ಲೇ’ ಎಂದು ಗಾಬರಿಯಿಂದ ಕೇಳಿದ.

ಆಗ ಚಂಬಸ್ಯ, ‘ಯಾಕ್ ಇರಬಾರ್ದೇನ್ಲೇ? ವಾಟ್ಸಪ್ಪಿನ್ಯಾಗೆ ಇಲ್ದೇ ಇರೋ ದಿನ ಯಾವ್ದೈತಿಪ್ಪಟ್ಟು? ಇನ್ನೊಂದ್ ಸ್ವಲ್ಪ ದಿನುಕ್ಕೆ ಅದೂ ಬರತೈತಿ. ಅದು ಬಂದಕೂಡ್ಲೆ, ನನ್ ಗಂಡ ಅದು ಕೊಡುಸ್ದ, ನನ್ ಗಂಡ ಇದು ಕೊಡುಸ್ದ ಅಂತ ವಾಟ್ಸಪ್ಪಿನ್ ಸ್ಟೇಟಸ್ಸಿನ್ಯಾಗ ಎಲ್ಲ ಯೆಂಡತೇರು ಆಕ್ಯಂತರೆ. ಅವತ್ತು ನಿನ್ ಬಕ್ಕಣದಾಗ್ ಜಗ್ಗಿ ರೊಕ್ಕಿರಬಕು ನೋಡು’ ಎಂದು ಎಚ್ಚರಿಸಿದ.

ಆಗ ಒಡನೇ ತನ್ನ ಹೆಂಡತಿಯ ಡಿಮ್ಯಾಂಡ್‌ಗಳ ಬಗ್ಗೆ ಯೋಚಿಸಿದ ರುದ್ರೇಶಿ, ತಲೆ ಮೇಲೆ ಕೈಹೊತ್ತು ಕುಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.