ADVERTISEMENT

ಚುರುಮುರಿ: ಕೊರೊನಾ ಹೈರಾಣು

ಚುರುಮುರಿ

ಮಣ್ಣೆ ರಾಜು
Published 26 ಆಗಸ್ಟ್ 2020, 19:30 IST
Last Updated 26 ಆಗಸ್ಟ್ 2020, 19:30 IST
Churamuri-27082020
Churamuri-27082020   

ಆರೋಗ್ಯ ಇಲಾಖೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿತ್ತು. ಸರ್ಕಾರಿ ಚಿಕಿತ್ಸಕ ಡಾ. ಸುಧಾರಕ್ ಆರೋಗ್ಯ ತಪಾಸಣೆಗೆ ಬಂದಿದ್ದರು.

‘ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯ ಇಲಾಖೆಯ ಆರೋಗ್ಯ ಕಾಪಾಡಿ ಸಾರ್...’

ತಪಾಸಣೆಗೆಂದು ಡಾ. ಸುಧಾರಕ್ ಸ್ಟೆತಾಸ್ಕೋಪನ್ನು ಕಿವಿಗೇರಿಸಿದರು.

ADVERTISEMENT

‘ಸ್ಟೆತಾಸ್ಕೋಪ್ ಬದಲು ಟೆಲಿಸ್ಕೋಪ್‌ನಲ್ಲಿ ಪರೀಕ್ಷೆ ಮಾಡಿ ಸಾರ್’.

‘ಟೆಲಿಸ್ಕೋಪ್ ಯಾಕೆ, ಆರೋಗ್ಯ ಇಲಾಖೆ ಬಗ್ಗೆ ನಮಗೆ ದೂರದೃಷ್ಟಿ ಇಲ್ಲ ಅಂತನಾ?’ ಡಾ. ಸುಧಾರಕ್‍ಗೆ ಸಿಟ್ಟು.

‘ಹೌದು ಸಾರ್, ಎಲ್ಲಾ ದೃಷ್ಟಿಯಿಂದಲೂ ಇಲಾಖೆ ಇನ್ನಷ್ಟು ಕಾಲ ಬಾಳಿ ಬದುಕಲಿ ಅಂತ’.

ಹೃದಯದ ಬಡಿತ, ನಾಡಿ ಮಿಡಿತ ಪರೀಕ್ಷಿಸಿದ ಡಾಕ್ಟರ್, ‘ಕೆಲಸದ ಒತ್ತಡದಿಂದ ಇಲಾಖೆಗೆ ಆಯಾಸವಾಗಿದೆ, ಬಳಲಿಕೆ, ಖಿನ್ನತೆಗೆ ಒಳಗಾಗಿದೆ’ ಎಂದರು.

‘ಇಲಾಖೆ ತುಂಬಾ ವೀಕ್ ಆಗಿದೆ ಡಾಕ್ಟ್ರೇ’.

‘ಹೌದು, ವಿಟಮಿನ್-ಡಿ (ಡಾಕ್ಟರ್ಸ್), ವಿಟಮಿನ್-ಎಸ್ (ಸಿಬ್ಬಂದಿ, ಸೌಕರ್ಯ) ಕೊರತೆಯಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದೆ’.

‘ಟ್ರೀಟ್‍ಮೆಂಟು, ಪೇಮೆಂಟು ನೀಡಿ ಶಕ್ತಿ ತುಂಬಿ ಸಾರ್’.

‘ಇಲಾಖೆಗೆ ಇನ್ನೊಂದು ಕಾಯಿಲೆ ಅಂಟಿಕೊಂಡಿದೆ...’

‘ಕೊರೊನಾ- ಗಿರೊನಾ ಅಂಟಿಕೊಂಡಿದೆಯಾ ಸಾರ್? ಪಾಪ! ಆರೋಗ್ಯ ಇಲಾಖೆ ಕೊರೊನಾ ನಿವಾರಣೆಗೆ ಬಿಡುವಿಲ್ಲದೆ ದುಡಿದಿದೆ, ಕೋವಿಡ್ ಟೆಸ್ಟ್ ಮಾಡಿಬಿಡಿ’.

‘ಇಲ್ಲ, ಗುಣಮಟ್ಟದ ಪಿಪಿಇ ಕಿಟ್ ಧರಿಸಿ ಆರೋಗ್ಯ ಇಲಾಖೆ ಸುರಕ್ಷಿತವಾಗಿ ಡ್ಯೂಟಿ ಮಾಡಿದೆ. ಆರೋಗ್ಯ ಇಲಾಖೆಗೆ ಕೊರೊನಾ ಹೈರಾಣು ಅಟ್ಯಾಕ್ ಆಗಿದೆ...’ ಡಾ. ಸುಧಾರಕ್ ರಿಪೋರ್ಟ್ ಕೊಟ್ಟರು.

‘ಕೊರೊನಾ ಹೈರಾಣು?! ಇದಾವ ದೇಶದ ಕಾಯಿಲೆ ಡಾಕ್ಟರ್?’

‘ಇದು ಡಿಪಾರ್ಟ್‌ಮೆಂಟ್‌ ರೋಗ. ಕೊರೊನಾ ಪರೀಕ್ಷೆಯ ಟಾರ್ಗೆಟ್ ರೀಚ್ ಮಾಡಲಾಗದೆ ಹೈರಾಣಾದ ಆರೋಗ್ಯ ಇಲಾಖೆಗೆ ಕೊರೊನಾ ಹೈರಾಣು ಅಂಟಿದೆ...’ ಅಂದರು.

ಆರೋಗ್ಯ ಇಲಾಖೆ ನರಳಿ, ಮಗ್ಗುಲಿಗೆ ಹೊರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.