ADVERTISEMENT

ಚುರುಮುರಿ | ಪಾಸಿಟಿವ್ ಸಂಭ್ರಮ!

ಚಂದ್ರಕಾಂತ ವಡ್ಡು
Published 23 ಆಗಸ್ಟ್ 2020, 16:48 IST
Last Updated 23 ಆಗಸ್ಟ್ 2020, 16:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೂರು ವರ್ಷಗಳ ಹಿಂದೆ ವಿನಾಕಾರಣ ಮಾತು ಬಿಟ್ಟಿದ್ದ ಹಿರಿಯೂರಿನ ಹೇಮಂತರಾಜನಿಂದ ತಿಂಗಳೇಶನಿಗೆ ಅನಿರೀಕ್ಷಿತ ಕರೆ. ‘ಅಣ್ಣಾ, ಹೇಗಿದ್ದೀಯಾ…?’

‘ಹೋ... ಚೆನ್ನಾಗಿದ್ದೇನೆ. ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ನೀನು ಚೆನ್ನಾಗಿದ್ದೀಯೇನಪಾ ಹೇಮಂತ…?’

‘ಏನು ಚೆನ್ನಾಗೋ… ಹೀಗಿದ್ದೇನೆ...!’ ಹೇಮಂತರಾಜನ ಅಸಮಾಧಾನ ಹೊರಬಿತ್ತು. 30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದಾಗಲೇ ತನ್ನ ಬದುಕಿನ ಧ್ಯೇಯ ಎಂ.ಎಲ್.ಎ. ಆಗುವುದು ಎಂದು ಘೋಷಿಸಿಕೊಂಡಿದ್ದ. ಎಂಜಿನಿಯರಿಂಗ್ ಪದವಿ ನಂತರ ಊರು ಸೇರಿ ಅರೆ ಗುತ್ತಿಗೆದಾರ, ಪೂರ್ಣ ರಾಜಕೀಯ ಪುಢಾರಿಯಾಗಿದ್ದ. ಎಷ್ಟೇ ತಿಪ್ಪರಲಾಗ ಹಾಕಿದರೂ ತಾಲ್ಲೂಕು ಪಂಚಾಯಿತಿ ಆಚೆಗೆ ಅವನ ರಾಜಕೀಯ ಬೆಳೆಯಲಿಲ್ಲ. ಅಸಹನೆಯ ಬೇರು ಗುರುತಿಸಿದ್ದ ತಿಂಗಳೇಶ ಅದೇ ಧಾಟಿಯಲ್ಲಿ…

ADVERTISEMENT

‘ದೋಸ್ತ… ಬ್ಯಾಸರ ಮಾಡಿಕೋಬ್ಯಾಡ. ಯಡ್ಯೂರಪ್ಪ, ಸಿದ್ದರಾಮಯ್ಯ… ಇವರೆಲ್ಲಾ ರಾತ್ರೋರಾತ್ರಿ ಮುಖ್ಯಮಂತ್ರಿ ಗದ್ದುಗೆ ಏರಿಲ್ಲ. ಎಷ್ಟು ಕಷ್ಟಪಟ್ಟಾರ… ಎಷ್ಟು ಹಂತ ದಾಟ್ಯಾರ…!’

‘ಹೌದಪಾ… ನಾನೂ ಎಷ್ಟೋ ವರ್ಷಗಳಿಂದ ರಾಜಕೀಯದಲ್ಲಿ ಏಗುತ್ತಿದ್ದೇನೆ. ಆದರೆ...’

‘ಬರೀ ಕಷ್ಟಪಟ್ಟರೆ ಪ್ರಯೋಜನವಿಲ್ಲ, ತಂತ್ರಗಾರಿಕೆ ಕಲಿಯಬೇಕು. ಮೊನ್ನೆ ಯಡ್ಯೂರಪ್ಪ ಮತ್ತು ಸಿದ್ದರಾಮಯ್ಯ ಕೋವಿಡ್ ಪಾಸಿಟಿವ್ ಆಗಿ ಒಂದೇ ಆಸ್ಪತ್ರೆ ಸೇರಿದ್ದರು. ಇಬ್ಬರಿಗೂ ಏಕಕಾಲಕ್ಕೆ ಕೋವಿಡ್ ಬರುವುದು, ಒಂದೇ ದವಾಖಾನೆ ಸೇರುವುದು, ಪರಸ್ಪರ ಅಭಿನಂದಿಸಿಕೊಳ್ಳುವುದು ಏನನ್ನು ತೋರಿಸುತ್ತದೆ?! ಶ್ರೀರಾಮುಲು ಕೂಡಾ ಆಸ್ಪತ್ರೆ ದಾರಿ ಕಂಡುಕೊಂಡರು. ಸ್ವಾತಂತ್ರ್ಯ ಹೋರಾಟದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದವರು ಅಧಿಕಾರ ಪಡೆದರು. ಹಾಗೆಯೇ ಈಗ ಕೋವಿಡ್ ಒಳ್ಳೆಯ ಅವಕಾಶ ಸೃಷ್ಟಿಸಿದೆ...’

ಜ್ಞಾನೋದಯವಾದಂತೆ ತಿಂಗಳೇಶನ ವಿಶ್ಲೇಷಣೆ ತುಂಡರಿಸಿದ ಹೇಮಂತರಾಜ, ‘ಹೌದಣ್ಣಾ... ನಮ್ಮ ಕ್ಷೇತ್ರದ ಎಮ್ಮೆಲ್ಲೆ ಕೂಡಾ ಕೋವಿಡ್ ಪಾಸಿಟಿವ್...’ ಎಂದು ಸಂಭಾಷಣೆ ಮುಗಿಸಿದ. ಮರುದಿನ ಹೇಮಂತರಾಜನ ಕರೆ; ದನಿಯಲ್ಲಿ ಮತ್ತೊಂದು ರಾಜಕೀಯ ಮೆಟ್ಟಿಲು ಏರಿದ ಸಂಭ್ರಮ. ‘ಅಣ್ಣಾ, ಪರೀಕ್ಷೆ ಮಾಡಿಸಿದೆ... ನಾನೂ ಕೋವಿಡ್ ಪಾಸಿಟಿವ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.