ADVERTISEMENT

ಗೆಳೆಯನಿಗೂ ಬೇಡವಾದೆನೇ...

ಸುಮಂಗಲಾ
Published 11 ಜನವರಿ 2021, 19:31 IST
Last Updated 11 ಜನವರಿ 2021, 19:31 IST
   

ಅಮೆರಿಕದಲ್ಲಿ ಕ್ಯಾಪಿಟಲ್ ಹಿಲ್ಲಿಗೆ ತನ್ನ ಬೆಂಬಲಿಗರು ಮುತ್ತಿಗೆ ಹಾಕಿದ್ದೇ ಕುರ್ಚಿ ಸಿಕ್ಕೇಬಿಟ್ಟಿತು ಎಂದುಕೊಂಡಿದ್ದ ಟ್ರಂಪಣ್ಣ, ಕೊನೆಗೂ ಇಂಗು ತಿಂದ ಮಂಗನಂತಾಗಿ, ದಾಳಿಗೈದವರನ್ನು ಬೈಯುವ ನಾಟಕ ಮಾಡಿದ. ಟ್ವಿಟರ್, ಯುಟ್ಯೂಬ್ ಇನ್ನಿತರ ಜಾಲತಾಣಗಳಿಂದ ಚೆನ್ನಾಗಿ ಬೈಸಿಕೊಂಡು, ಬಹಿಷ್ಕಾರ ಹಾಕಿಸಿಕೊಂಡ ಟ್ರಂಪಣ್ಣ, ವಿಶ್ವದ ಯಾವ್ಯಾವ ನಾಯಕಮಣಿಗಳೆಲ್ಲ ಮುತ್ತಿಗೆಯನ್ನು ಖಂಡಿಸಿದ್ದಾರೆಂದು ಪತ್ರಿಕಾ ವರದಿಗಳನ್ನು ನೋಡತೊಡಗಿದ.

ಉಳಿದವರಿರಲಿ... ‘ಅಬ್‌ ಕಿ ಬಾರ್‌ ಟ್ರಂಪ್ ಕಿ ಸರ್ಕಾರ್’ ಎಂದೆಲ್ಲ ಜೈಕಾರ ಹಾಕಿಸಿದ್ದ ತನ್ನ ದೋಸ್ತ್ ನಮೋಗುರುಗಳು ಕೂಡ ಇದು ತಪ್ಪು ಎನ್ನುವುದೇ? ‘ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ’, ‘ಹೌಡಿ-ಮೋದಿ ಸಮಾವೇಶದಲ್ಲಿ ಮೋದಿ ಟ್ರಂಪ್ ಮೋಡಿ’ ಅಂತೆಲ್ಲ ಹೆಡ್ಡಿಂಗ್ ನೀಡಿದ್ದ ಪತ್ರಿಕೆಗಳೇ ಹೀಗೆ ನಮೋಗುರುಗಳು ಕಟುಪದಗಳಲ್ಲಿ ನಿಂದಿಸಿದ್ದಾರೆಂದು ವರದಿ ಮಾಡುವುದೇ... ಅಕಟಕಟಾ... ಟ್ರಂಪಣ್ಣ ತಡೆಯಲಾಗದೆ ನಮೋಗುರುವಿಗೆ ಫೋನು ಹಚ್ಚಿದ.

ದಾಳಿಕೋರರ ನಡುವೆ ಭಾರತದ ಧ್ವಜವೂ ಕಾಣಿಸಿದ್ದರಿಂದ ನಮೋಗುರುಗಳು ಮೊದಲೇ ಗರಂ ಆಗಿದ್ದರು. ‘ಬಾಯಿಗೆ ಬಂದದ್ದ ವದರೂದು ಬಿಡಂತ ಅವತ್ತೇ ಹೇಳ್ದೆ. ನುಡಿದರೆ ಮುತ್ತಿನ ಹಾರದಂತೆ, ಮನದ ಮಾತಿನಂತಿರಬೇಕು. ಮೆತ್ತಗೆ ಮಾತಾಡಿ, ಆಪರೇಶನ್ ರಿಪಬ್ಲಿಕ್ ಮಾಡಪಾ. ಕರುನಾಡಿನೊಳಗ ಆಪರೇಶನ್ ಕಮಲ ಮಾಡಿದ ಪರಿಣತರು ಅದಾರ, ಬೇಕಿದ್ರ ಕಳಿಸ್ತೀನಿ ಅಂದಿದ್ದೆ, ನೀ ಕೇಳಲಿಲ್ಲ. ನಮ್ಮನ್ನು ನೋಡು ಪ್ರತಿಭಟಿಸೋರನ್ನ ಹೆಂಗ ಇಟ್ಟೀವಂತ. ಇವನೆ ನೋಡು ಅನ್ನದಾತ, ದೆಹಲಿ ಹೊರಗೆ ಕೂತಿಹನು, ಮಳೆಯ ಗುಡುಗು ಚಳಿಯ ನಡುಗು ಮಾರುಕಟ್ಟೆ ಬೇಗೆ ಸಹಿಸುತ... ಹಾವೂ ಸತ್ತರೂ ನಮ್ಮ ಕೋಲು ಮುರಿಯದಿರೆಂದು ಆಗೀಗ ಜಾಣಮೌನ ತಾಳುವೆವು... ನನ್ನಂತೆ ಶಬ್ದ ಗಾರುಡಿಗನಾಗಿದ್ದರೆ ಎಲ್ಲೆಡೆ ವಿಜಯ ನಿಶ್ಚಯವು’ ಗೆಳೆಯನ ಸಾಧನೆಯ ಭಾಷಣ ಕೇಳುತ್ತ, ಟ್ರಂಪಣ್ಣನಿಗೆ ಕೋಪ ನೆತ್ತಿಗೇರಿ, ಟಪಾರನೆ ಫೋನು ಕುಕ್ಕಿದ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.