ADVERTISEMENT

ಚುರುಮುರಿ: ಶಾಂತಿ ಭಜನೆ

ಸುಮಂಗಲಾ
Published 12 ಅಕ್ಟೋಬರ್ 2025, 23:21 IST
Last Updated 12 ಅಕ್ಟೋಬರ್ 2025, 23:21 IST
   

‘ನೊಬೆಲ್ ಕಪ್‌ ಸಿಗದಿದ್ದರೂ ಶಾಂತಿ ಸ್ಥಾಪನೆ ಕೆಲಸ ಮುಂದುವರಿಸ್ತೀನಿ ಅಂತ ಟ್ರಂಪಣ್ಣ ಘೋಷಣೆ ಮಾಡ್ಯಾನೆ. ಇನ್ಮುಂದೆ ಭೂಲೋಕದಲ್ಲಿ ಎಲ್ಲೂ ಜಗಳಾ ಅನ್ನೂದೆ ಇರಂಗಿಲ್ಲ!’ ಬೆಕ್ಕಣ್ಣ ಅಭಿಮಾನದಿಂದ ಹೇಳಿತು.

‘ಸೋತು ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೂ ಮಂದಿ ಅಂವಾ’ ಎಂದೆ ನಾನು.

‘ಅಂವಾ ಎಲ್ಲಿ ಕೆಳಕ್ಕೆ ಬಿದ್ದಾನೆ? ಅಂವಾ ಅಗದಿ ಭಯಂಕರ ಮ್ಯಾಲೆ ಅದಾನೆ! ವೆನಿಜುವೆಲಾದ ಮಚಾದೊ ತನಗೆ ಕೊಟ್ಟ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಟ್ರಂಪಣ್ಣನಿಗೇ ಸಮರ್ಪಣೆ ಮಾಡ್ಯಾಳೆ! ರಷ್ಯಾದ ಪುಟಿನಂಕಲ್ಲೂ ನಮ್‌ ಟ್ರಂಪಣ್ಣನ್ನ ಹೊಗಳ್ಯಾನೆ.’ ಬೆಕ್ಕಣ್ಣ ಬಲು ಉತ್ಸಾಹದಿಂದ ವರ್ಣಿಸಿತು.  

ADVERTISEMENT

‘ಹಂಗಾರೆ ಟ್ರಂಪಣ್ಣ ಉಕ್ರೇನ್–ರಷ್ಯಾ ಯುದ್ಧನೂ ನಿಲ್ಲಿಸತಾನೇನು?’ ನಾನು ಕೆಣಕಿದೆ.

‘ಖಂಡಿತಾ ನಿಲ್ಲಸತಾನೆ!’ ಬೆಕ್ಕಣ್ಣ ಭರವಸೆಯಿಂದ ನುಡಿಯಿತು.

‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತ. ಈಗ ಊರ ಉಸಾಬರಿ ಬಿಡು. ನಮ್‌ ದೇಶದಾಗೆ ಶಾಂತಿ
ಸ್ಥಾಪನೆ ಮಾಡೋರು ಯಾರು ಅಂತ ವಿಚಾರ ಮಾಡೂಣು’ ಎಂದೆ.

‘ನಮ್‌ ದೇಶದಾಗೆ ಎಲ್ಲಿ ಸಂಘರ್ಷ ನಡೆದೈತಿ? ಯಾರು ಜಗಳಾ ಮಾಡಾಕೆ ಹತ್ಯಾರೆ? ಕಳೆದ ಹನ್ನೊಂದು ವರ್ಷದಿಂದ ಎಲ್ಲಾ ಕಡಿಗಿ ಶಾಂತೀನೆ ತಾಂಡವವಾಡತೈತಿ! ಜಗಳ, ಸಂಘರ್ಷ ಇಂತಾವೆಲ್ಲ ಈಗ ಬರೇ ಶಬ್ದಕೋಶದ ಪದಗಳು!’ ಬೆಕ್ಕಣ್ಣ ವಾದಿಸಿತು.

‘ಸಿಎಎ ಕಾಯ್ದೆ ವಿರೋಧಿಸಿ ದಿಲ್ಲೀವಳಗೆ ಹೋರಾಟ ನಡೆಸಿದ್ರು. ಹೊಸ ಕೃಷಿ ಕಾಯ್ದೆ ಪ್ರತಿಭಟಿಸಿ ರೈತರು ವರ್ಷಾನುಗಟ್ಟಲೆ ಹೋರಾಟ ಮಾಡಿದ್ರು. ಮಣಿಪುರ ಸಂಘರ್ಷ ಇನ್ನಾ ಬಗೆಹರಿದಿಲ್ಲ. ಇಷ್ಟಲ್ಲದೇ ಚಿಕ್ಕಪುಟ್ಟ ಸಂಘರ್ಷಗಳು ಎಲ್ಲಾ ರಾಜ್ಯದಾಗೆ ನಡೀತಾನೆ ಇರತಾವು.’ ನಾನೂ ಬಿಡದೇ ವಾದಿಸಿದೆ.

‘ಮನಿ ಅಂದ್‌ ಮ್ಯಾಲೆ ಸಣ್ಣಪುಟ್ಟ ಮನಸ್ತಾಪ ಇರೂದೆ. ಇವೆಲ್ಲ ವಿಪಕ್ಷಗಳ ಹುನ್ನಾರ ಅಷ್ಟೇ’ ಎಂದ ಬೆಕ್ಕಣ್ಣ
‘ಚಿಂತ್ಯಾಕ ಮಾಡುತ್ತಿದ್ದಿ, ವಿಶ್ವಗುರುವಿದ್ದಾನೆ’ ಎಂದು
ಭಜನೆ ಹಾಡಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.