ADVERTISEMENT

ವೈಫ್ ಟ್ಯಾಗ್ ವಿಚಾರಣೆ

ಗುರು ಪಿ.ಎಸ್‌
Published 18 ಡಿಸೆಂಬರ್ 2019, 19:26 IST
Last Updated 18 ಡಿಸೆಂಬರ್ 2019, 19:26 IST
ಚುರುಮುರಿ
ಚುರುಮುರಿ   

'ಇದೇನು, ಮನೆಯೊಳಗೆ ಬರ್ತಿದ್ದಂಗೆ 'ಟೊಂಯ್' ಅಂತಾ ಬೀಪ್ ಸೌಂಡ್ ಬರ್ತಿದೆ. ಏನ್ಮಾಡಿದ್ದೀಯಾ?' ಕೇಳ್ದೆ.

'ಫಾಸ್ಟ್ಯಾಗ್ ಥರ ವೈಫ್ ಟ್ಯಾಗ್ ಕಂಡು ಹಿಡಿದಿದೀನಿ ರೀ... ಇದು ನಿಮ್ಮ ತಲೆ ಜೊತೆಗೆ, ನಿಮ್ಮ ಮೊಬೈಲ್ ಫೋನನ್ನೂ ರೀಡ್ ಮಾಡುತ್ತೆ' ಹೆಮ್ಮೆಯಿಂದ ಹೇಳಿದಳು ಹೆಂಡ್ತಿ.

'ಇದ್ರಿಂದ ಏನ್ ಪ್ರಯೋಜನ?'
'ನೀವು ಖುಷೀಲಿದಿರೊ, ಬೇಜಾರಲ್ಲಿದಿರೊ, ಈ ಟೈಮ್‌ನಲ್ಲಿ ನಾನು ಹೆಚ್ಚು ಮಾತಾಡಬೇಕೋ, ಕಡಿಮೆ ಮಾತಾಡಬೇಕೋ, ವೆಜ್ ಬೇಕೋ, ನಾನ್‌ವೆಜ್ ಮಾಡಬೇಕೋ ಅನ್ನೋದೆಲ್ಲ ಇದ್ರಿಂದ ತಿಳ್ಕೋಬಹುದು ರೀ.‌..'

ADVERTISEMENT

'ಅಬ್ಬಬ್ಬಬ್ಬ... ಪತಿಯ ಇಚ್ಛೆಯನರಿತು ಬಾಳುವ ನಿನ್ನಂಥ ಸತಿ ಇದ್ದರೆ, ಕಾಶ್ಮೀರದಂಥ ಸ್ವರ್ಗಕ್ಕೇ ಕಿಚ್ಚು ಹಚ್ಚಿಬಿಡ್ತೀನಿ..' ಖುಷಿಯಿಂದ ಹೇಳ್ದೆ.

'ಮುಖ ತೊಳೆದು, ಫ್ರೆಷ್ ಆಗಿ. ಈರುಳ್ಳಿ ಇಲ್ದಿರೋ ಉತ್ತಪ್ಪ ಮಾಡ್ಕೊಂಡು ಬರ್ತಿನಿ' ಎನ್ನುತ್ತಾ ಒಳಗೆ ಹೋದಳು ಮಡದಿ.
'ಏನಿವತ್ತು ಟ್ರೀಟ್ಮೆಂಟ್ ಸಿಗ್ತಿದೆ' ಎಂದುಕೊಳ್ಳುತ್ತಾ, ಪಕ್ಕದಲ್ಲೇ ಇದ್ದ ಲ್ಯಾಪ್‌ಟಾಪ್ ಮೇಲೆ ಕಣ್ಣು ಹಾಯಿಸಿದೆ. ವೈಫ್ ಟ್ಯಾಗ್ ಅಂತಿದ್ದ ಫೋಲ್ಡರ್ ಎದ್ದು ಕಾಣ್ತಿತ್ತು. ಅದರ ಮೇಲೆ ಕ್ಲಿಕ್ ಮಾಡಿದ್ದೇ ತಡ ಬೆವರು ಕಿತ್ತು ಬರತೊಡಗಿತು!

‘ನಿಮ್ಮ ಗಂಡ ಇಂದು ಡಿಲೀಟ್ ಮಾಡಿದ ಮೆಸೇಜ್‌ಗಳು 25, ವಾಟ್ಸ್‌ಆ್ಯಪ್ ವಿಡಿಯೊ ಕಾಲ್ 5... ಅತಿಹೆಚ್ಚು ಕರೆ ಮಾಡಿರೋದು ಈ ನಂಬರ್‌ಗೆ... ಇಷ್ಟ್ ಗಂಟೆಯಿಂದ ಅಷ್ಟ್ ಗಂಟೆಯವರೆಗೂ ಈ ಪಾರ್ಕ್‌ನಲ್ಲಿ ಓಡಾಡಿದಾರೆ...'

ಅಚ್ಛೇ ದಿನ್ ಕನಸು ಕಾಣುತ್ತಿದ್ದ ನನಗೆ ಕ್ರಿಟಿಕಲ್ ಟೈಮ್ ಪ್ರಾರಂಭವಾಯಿತು. ನಮ್ಮ ಒಳ್ಳೆಯದಕ್ಕೆ ಎಂದು ತೋರುವ ಎಲ್ಲವೂ ಹೇಗೆ ಕೊರಳು ಕೊಯ್ದುಬಿಡುತ್ತವೆ ಎಂದು ಮೊದಲ ಬಾರಿಗೆ ಸೀರಿಯಸ್ ಆಗಿ ಯೋಚಿಸತೊಡಗಿದೆ.

'ಪೌರತ್ವ' ಸರ್ಟಿಫಿಕೇಟ್ ತರಹ, ಬೇಕಾದ್ರೆ 'ಒಳ್ಳೆಯವನು' ಅನ್ನೋ ಸರ್ಟಿಫಿಕೇಟ್ ಮಾಡಿಸ್ಕೊಂಡ್ ಬರ್ತಿದ್ದೆ, ವೈಫ್ ಹೀಗೆಲ್ಲ ಚೆಕ್ ಮಾಡಬಾರದಿತ್ತು ಎಂದೆನಿಸತೊಡಗಿತು‌.
'ಒಳಗೆ ಬನ್ನಿ.. ಉತ್ತಪ್ಪ ರೆಡಿ ಇದೆ.. ರೀ...'
ಮಹಾಸಮರಕ್ಕೂ ಮುನ್ನ ಮೊಳಗುವ ಕಹಳೆಯ ಸದ್ದಿನಂತೆ ಕೇಳತೊಡಗಿತು, ರೀ... !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.