ADVERTISEMENT

ಚುರುಮುರಿ: ಗುಂಡಿ ಭಾಗ್ಯ!

ಬಿ.ಎನ್.ಮಲ್ಲೇಶ್
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
   

‘ಲೇ ತೆಪರ, ಇದ್ಯಾಕೋ ಹಿಂಗೆ ಮೂತಿ ಚೂಪು ಮಾಡ್ಕಂಡು ಜೂಗರಿಸ್ತಾ ಕುಂತಿದೀಯ?’ ಹರಟೆಕಟ್ಟೆಯಲ್ಲಿ ತೆಪರೇಸಿಯನ್ನ ಗುಡ್ಡೆ ಕೇಳಿದ.

‘ಇವನ್ನ ನೋಡಿದ್ರೆ ಹಕ್ಕಿ ಜ್ವರಾನೋ ಹಂದಿ ಜ್ವರಾನೋ ಬಂದಂಗೆ ಕಾಣ್ಸುತ್ತಪ್ಪ. ಈಗ ಎಲ್ಲ ಕಡೆ ಹಂದಿ ಜ್ವರ ಜಾಸ್ತಿಯಾಗೇತಂತೆ...’ ಕೊಟ್ರ ಕಿಸಕ್ಕೆಂದ.

‘ಮಂಜಮ್ಮ ಶುಂಠಿ ಚಾ ಮಾಡು, ಪಾಪ ತೆಪರಂಗೆ ಹುಷಾರಿಲ್ಲ ಅನ್ಸುತ್ತೆ...’ ದುಬ್ಬೀರ ಕನಿಕರ ತೋರಿದ.

ADVERTISEMENT

‘ನಂಗೇನೋ ಇದು ಮೂಳೆ ಜ್ವರ ಅನ್ಸುತ್ತಪ್ಪ. ಬಂಗ್ಲೆ ಗುಡ್ಡದಲ್ಲಿ ಈ ತೆಪರ ಅಸ್ಥಿಪಂಜರ ನೋಡಿ ಹೆದರ್ಕಂಡಿರಬೇಕು, ಒಂದು ತಾಯತ ಕಟ್ಟಿಸಿದ್ರೆ ಸರಿ ಹೋಗ್ತಾನೆ...’ ಗುಡ್ಡೆ ಸಲಹೆ.

‘ಅಲ್ಲ, ಈ ಜ್ವರಗಳಲ್ಲಿ ಎಷ್ಟ್ ನಮೂನಿ ಅದಾವು?’ ಮಂಜಮ್ಮ ಕೇಳಿದಳು.

‘ಒಂದು ಏಳೆಂಟು ಇರಬೇಕು. ಹಕ್ಕಿ ಜ್ವರ, ಹಂದಿ ಜ್ವರ, ಪ್ರೇಮ ಜ್ವರ, ಪರೀಕ್ಷೆ ಜ್ವರ, ಸಿ.ಡಿ. ಜ್ವರ, ಇ.ಡಿ ಜ್ವರ... ಸಾಕಾ?’

‘ಲೇ ಗುಡ್ಡೆ, ಅವೆಲ್ಲ ಏನಿಲ್ಲ, ಬೆಂಗ್ಳೂರಿನ ಗುಂಡಿಗಳಲ್ಲಿ ಬೈಕ್ ಓಡಿಸಿ ಮೈ ಕೈ ನೋವಾಗಿ ಜ್ವರ ಬಂದಿರಬೇಕು ಅಷ್ಟೆ...’

‘ಓ... ಅಂದ್ರೆ ಇದು ಗುಂಡಿ ಭಾಗ್ಯ! ಎಲ್ರು ಹುಷಾರಾಗಿ ನೋಡ್ಕಂಡು ಬೈಕ್ ಓಡಿಸ್ರಪ್ಪ, ಆಮೇಲೆ ಯಾವುದಾರ ಗುಂಡಿಗೆ ಬಿದ್ದು ಗೊಟಕ್ ಅಂದೀರ...’ ಮಂಜಮ್ಮ ನಕ್ಕಳು.

ಎಷ್ಟು ಕೀಟಲೆ ಮಾಡಿದ್ರೂ ಪಿಟಿಕ್ಕನ್ನದೆ ಕೂತಿದ್ದ ತೆಪರೇಸಿ. ‘ಏನಾದ್ರು ಮಾತಾಡೋ, ಏನು ಯೋಚಿಸ್ತಿದೀಯ?’ ದುಬ್ಬೀರ ಕೇಳಿದ.

‘ಏನಿಲ್ಲ, ಮನುಷ್ಯನಿಗೆ ಹಕ್ಕಿ ಜ್ವರ, ಹಂದಿ ಜ್ವರ ಬರ್ತಾವೆ ಓಕೆ, ಅದೇ ತರ ಅಕಸ್ಮಾತ್ ಹಂದಿಗಳಿಗೆ ಮನುಷ್ಯನ ಜ್ವರ ಬಂದ್ರೆ ಅವು ಹೆಂಗಾಡ್ತಿದ್ವು ಅಂತ ಯೋಚಿಸ್ತಿದ್ದೆ...’ ಎಂದ ತೆಪರ.

‘ಯಪ್ಪಾ , ಇದ್ನ ನಾವು ಯೋಚಿಸ್ಲೇ ಇಲ್ವಲ್ಲೋ...’ ಎಂದ ಕೊಟ್ರ.

‘ಇಂಥದೆಲ್ಲ ಟೀವಿ ಪತ್ರಕರ್ತರಿಗೇ ಹೊಳಿಯೋದು’ ಎಂದ ಗುಡ್ಡೆ.

ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.