ADVERTISEMENT

ಚುರುಮುರಿ | ಹೆಡ್‌ಲೈನ್ ಹೆಡ್ಡೇಕ್!

ಮಣ್ಣೆ ರಾಜು
Published 9 ಡಿಸೆಂಬರ್ 2025, 22:44 IST
Last Updated 9 ಡಿಸೆಂಬರ್ 2025, 22:44 IST
   

ಶಾಲಾ ಚಟುವಟಿಕೆ ಪರಿಶೀಲಿಸಲು ಶಿಕ್ಷಣಾಧಿಕಾರಿ ಬಂದಿದ್ದರು.

‘ಪ್ರೇಯರ್ ಹಾಲ್‌ನಲ್ಲಿ ವಿದ್ಯಾರ್ಥಿಗಳ ‘ನ್ಯೂಸ್ ಪೇಪರ್ ರೀಡಿಂಗ್’ ಚಟುವಟಿಕೆಯನ್ನು ಈಗ ನಿಲ್ಲಿಸಿದ್ದೀರಂತೆ ಯಾಕೆ?’ ಗರಂ ಆಗಿ ಕೇಳಿದರು.

‘ಸಾರ್, ಪೇಪರ್ ಹೆಡ್‌ಲೈನ್ ಓದಿಸುವುದು ನಮಗೆ ಹೆಡ್ಡೇಕ್ ಆಗಿದೆ’ ಎಂದರು ಹೆಡ್ ಮೇಷ್ಟ್ರು.

ADVERTISEMENT

‘ಅದೇ ಯಾಕೇಂತ? ನ್ಯೂಸ್ ಪೇಪರ್ ಓದಿದರೆ ಮಕ್ಕಳಲ್ಲಿ ಲೋಕಜ್ಞಾನ ಬೆಳೆಯುತ್ತೆ ಕಣ್ರೀ’.

‘ಬಂಡೆಗೆ ಟಗರು ಡಿಚ್ಚಿ, ರಾಜಾ ಹುಲಿ ಅಖಾಡಕ್ಕೆ’ ಎನ್ನುವ ಹೆಡ್‌ಲೈನ್‌ಗಳ ಬಗ್ಗೆ ಮಕ್ಕಳು ಕೇಳಿದರೆ ಏನು ವಿವರಣೆ ಕೊಡೋದು ಸಾರ್?’ ವಿಜ್ಞಾನ ಮೇಷ್ಟ್ರು ಕೇಳಿದರು.

‘60 ಪರ್ಸೆಂಟ್ ಸರ್ಕಾರ: ವಿಪಕ್ಷ ಆರೋಪ’ ಎಂಬ ಹೆಡ್‌ಲೈನ್ ಓದಿದ ಮಕ್ಕಳು, ‘ಇನ್ನೂ ಹಾರ್ಡ್ ವರ್ಕ್ ಮಾಡಿ ಪರ್ಸೆಂಟೇಜ್ ಹೆಚ್ಚಿಸಿಕೊಂಡರೆ ಸರ್ಕಾರ
ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಬಹುದು ಅಲ್ವಾ ಸಾರ್?’
ಎಂದು ಕೇಳಿದರೆ ಏನು ಹೇಳೋದು?’ ಗಣಿತ ಮೇಷ್ಟ್ರಿಗೆ ಕಳವಳ.

‘ವಿದ್ಯಾರ್ಥಿ ನೇಣಿಗೆ ಶರಣು, ಮೊಬೈಲ್ ಕೊಡಲಿಲ್ಲವೆಂದು ಮನೆ ಬಿಟ್ಟುಹೋದ ಬಾಲಕ’ ಈ ರೀತಿ ಹೆಡ್‌ಲೈನ್‌ಗಳನ್ನು ಮಕ್ಕಳಿಂದ ಓದಿಸಬೇಕೆ ಸಾರ್?’ ಸಮಾಜ ಶಿಕ್ಷಕರು ಕೇಳಿದರು.

‘ಸಮಾಜದಲ್ಲಿ ನಡೆಯುವಂಥ ಪ್ರಕರಣಗಳನ್ನೇ
ಪತ್ರಿಕೆಗಳು ವರದಿ ಮಾಡುತ್ತವೆ ಕಣ್ರೀ’ ಅಂದ್ರು ಶಿಕ್ಷಣಾಧಿಕಾರಿ.

‘ಸಾರ್, ‘ನಾಟಿ ಕೋಳಿ ಟಿಫನ್ ತಿಂದ ಸಿಎಂ–ಡಿಸಿಎಂ’ ಎಂಬ ನ್ಯೂಸ್ ಓದಿದ ಮೇಲೆ ಮಕ್ಕಳು ಸ್ಕೂಲ್‌ನಲ್ಲಿ ಮೊಟ್ಟೆ ತಿನ್ನೋದಿಲ್ಲ ಎನ್ನುತ್ತಿವೆ’ ಹೆಡ್ ಮೇಷ್ಟ್ರು ವಿಚಾರ ಹೇಳಿದರು.

‘ಯಾಕಂತೆ?’

‘ಮೊಟ್ಟೆ ಬೇಡ, ಬಿಸಿಯೂಟಕ್ಕೆ ನಾಟಿ ಕೋಳಿ ಸಾಂಬಾರ್ ಬೇಕೆಂದು ಕೇಳುತ್ತಿದ್ದಾರೆ!’

‘ಕೋಳಿ ಕೇಳಿ ಮಸಾಲೆ ಅರೆಯಬಾರದು, ಮಕ್ಕಳನ್ನು ಕೇಳಿ ಸಾಂಬಾರ್ ಮಾಡಬಾರದು ಕಣ್ರೀ...’ ಎಂದು ಸಣ್ಣದಾಗಿ ರೇಗಿ ಶಿಕ್ಷಣಾಧಿಕಾರಿ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.