ಚುರುಮುರಿ: ಕದನ ವಿರಾಮ!
‘ಯಾಕೋ ಟೈಂ ಸರಿ ಇಲ್ಲ ಕಣ್ರಲೆ, ಎಲ್ಲ ಕಡೆ ಬರೀ ಬೀಳೋ ಸುದ್ದಿಗಳೇ ಬರ್ತದಾವು...’ ಎಂದ ಗುಡ್ಡೆ.
‘ಅಂದ್ರೆ? ಅದೇನು ಬಿಡಿಸಿ ಹೇಳು’ ಎಂದ ದುಬ್ಬೀರ.
‘ವಾರದ ಕೆಳಗೆ ವಿಮಾನ ಬಿತ್ತು, ಆ ಮೇಲೆ ಹೆಲಿಕಾಪ್ಟರ್ ಬಿತ್ತು, ಮೊನ್ನೆ ಸೇತುವೆ ಬಿತ್ತು, ನಿನ್ನೆ ಬಂಡೆ ಸಾಹೇಬ್ರ ಸೈಕಲ್ ಬಿತ್ತು, ಇವತ್ತು ಬಾಂಬ್ ಬೀಳ್ತದಾವು...’
‘ವಿಮಾನ ಬೀಳೋ ಬಗ್ಗೆ ಗುರುಗಳು ಮೊದ್ಲೇ ಭವಿಷ್ಯ ನುಡಿದಿದ್ರು, ಅದೇ ತರ ಸೈಕಲ್ ಬೀಳೋ ಬಗ್ಗೆ ಯಾಕೆ ಭವಿಷ್ಯ ಹೇಳ್ಲಿಲ್ಲ...?’
‘ಸೈಕಲ್ಲಿಂದ ಬಿದ್ದೋರು ಮತ್ತೆ ಎದ್ರಲ್ಲ, ಹಾಗಾಗಿ ಇದು ಲೆಕ್ಕಕ್ಕೆ ಬರಲ್ಲ ಅನ್ಸುತ್ತೆ...’
‘ನಿನ್ತೆಲಿ, ಬಿದ್ದ ಮೇಲೆ ಅವರು ಎಷ್ಟೊತ್ತಿಗೆ ಬಿದ್ರು, ಯಾವ ದಿಕ್ಕಿಗೆ ಬಿದ್ರು, ಬೀಳುವಾಗ ಎಡಗಾಲಿಟ್ರಾ, ಬಲಗೈ ಇಟ್ರಾ, ಇವೆಲ್ಲ ಲೆಕ್ಕಕ್ಕೆ ಬರ್ತಾವು... ಹಲ್ಲಿ ಬಿದ್ದಾಗ ಶಕುನ ಹೇಳಲ್ವಾ? ಹಂಗೇ ಇದೂನೂ...’
‘ಲೇಯ್, ಭವಿಷ್ಯ ಗಿವಿಷ್ಯ ನಂಬಬಾರ್ದು ಕಣಲೆ. ಎಲ್ಲೋ ಏನೋ ಆಗೋದನ್ನ ಇಲ್ಲಿ ಕುಂತು ಹೇಳೋಕಾಗುತ್ತಾ? ವಿಜ್ಞಾನ ಒಂದೇ ಸತ್ಯ’ ಎಂದ ತೆಪರೇಸಿ.
‘ಭವಿಷ್ಯನೂ ಒಂದು ರೀತಿ ವಿಜ್ಞಾನನೇ...’ ದುಬ್ಬೀರ ವಾದಿಸಿದ. ಇಬ್ಬರ ನಡುವೆ ಜಗಳ ಶುರುವಾಗಿ ಜೋರಾಯಿತು. ಮಂಜಮ್ಮನ ಚಾದಂಗಡಿ ಮೇಲೆ ಬಾಂಬು, ಕ್ಷಿಪಣಿ ಬೀಳೋದೊಂದು ಬಾಕಿ.
‘ಲೇಯ್, ಈಗ ಇಬ್ರೂ ಬಾಯಿ ಮುಚ್ಕಳದಿದ್ರೆ ಇನ್ಮುಂದೆ ನಿಮ್ಗೆ ಉದ್ರಿ ಕೊಡಲ್ಲ...’ ಮಂಜಮ್ಮ ಗರಂ ಆದಳು. ಒಂದೇ ಮಾತು, ಇಬ್ರೂ ಗಪ್ ಚುಪ್!
‘ವಾರೆವ್ಹಾ ಮಂಜಮ್ಮ, ಜಗಳ ನಿಲ್ಸೋದ್ರಲ್ಲಿ ನೀನು ಟ್ರಂಪ್‌ಗಿಂತ ವಾಸಿ, ನಿನ್ನ ಟ್ರುಂಪಮ್ಮ ಅಂತ ಕರೀಬೋದು’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.