ADVERTISEMENT

ಚುರುಮುರಿ: ಆಕಾಶಕ್ಕೇ ಏಣಿ!

ಸುಮಂಗಲಾ
Published 17 ಆಗಸ್ಟ್ 2025, 19:35 IST
Last Updated 17 ಆಗಸ್ಟ್ 2025, 19:35 IST
<div class="paragraphs"><p>ಚುರುಮುರಿ: ಆಕಾಶಕ್ಕೇ ಏಣಿ!</p></div>

ಚುರುಮುರಿ: ಆಕಾಶಕ್ಕೇ ಏಣಿ!

   

ಬೆಕ್ಕಣ್ಣ ಯುಟ್ಯೂಬಿನಲ್ಲಿ ವಿಡಿಯೊ ನೋಡುತ್ತ ಅಗದಿ ರೋಮಾಂಚನದಿಂದ, ‘ಯಪ್ಪೋ... ದೃಷ್ಟಿಯಾಗತೈತಿ’ ಎನ್ನುತ್ತ, ಲ್ಯಾಪ್‌ಟಾಪ್‌ ಪರದೆಗೇ ಕೈಯಿಂದ ನಿವಾಳಿಸಿ, ನೆಟಿಕೆ ಮುರಿದು ದೃಷ್ಟಿ ತೆಗೆಯಿತು.

‘ಯಾರಿಗೆ ದೃಷ್ಟಿ ತೆಗೆಯಾಕೆ ಹತ್ತೀಯಲೇ’ ಎಂದೆ ಅಚ್ಚರಿಯಿಂದ.

ADVERTISEMENT

‘ಮೋದಿಮಾಮಾ ಕೆಂಪು ಕೋಟೆವಳಗ ಹನ್ನೆರಡನೇ ಸಲ ಭಾಷಣ ಮಾಡ್ಯಾನೆ... ಈ ಸಲನೂ ರೆಕಾರ್ಡ್‌ ನಮ್‌ ಮೋದಿಮಾಮಂದೇ!’ ಎಂದು ಎದೆಯುಬ್ಬಿಸಿತು.  

‘2015ರ ಸ್ವಾತಂತ್ರ್ಯ ದಿನಾಚರಣೆ ದಿನ 88 ನಿಮಿಷ ಮಾತನಾಡಿದ್ರು, ಆವಾಗ ನೆಹರೂ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದರು. ಹೋದ ವರ್ಸ 98 ನಿಮಿಷ ಮಾತಾಡಿದ್ರು. ಈ ಸಲ ಅದಕ್ಕಿಂತಲೂ ಐದು ನಿಮಿಷ ಹೆಚ್ಚು ಭಾಷಣ ಮಾಡಿ, ತಮ್ಮದೇ ದಾಖಲೆ ಮುರಿದಾರೆ’ ಬೆಕ್ಕಣ್ಣ ಪುಳಕದಿಂದ ವಿವರಿಸಿತು.

‘ಪ್ರತಿಸಲಾನೂ ಬ್ಯಾರೆ ಬ್ಯಾರೆ ಬಣ್ಣದ, ವಿಭಿನ್ನ ಶೈಲಿಯ ರುಮಾಲು ತಲಿಗಿ ಸುತ್ತಿರತಾರಲ್ಲ… ಅದೂ ಒಂದು ರೆಕಾರ್ಡೇ ಮತ್ತ!’ ಎಂದೆ. 

‘ಸುಮ್ಮನೇ ಕೊಂಕು ಮಾತಾಡಬ್ಯಾಡ. 75ರ ವಯಸ್ಸಿನಲ್ಲಿ 103 ನಿಮಿಷ ನಿಂತು ಭಾಷಣ ಕುಟ್ಟೋ ಸಾಮರ್ಥ್ಯ ಎಷ್ಟ್‌ ಮಂದಿಗಿ ಇರತೈತಿ?’ ಎಂದು ಗುರುಗುಟ್ಟಿತು.

‘ಹೋಗಲಿ ಬಿಡು… ಜಿಎಸ್‌ಟಿ ಇಳಸತೀವಿ ಅಂದ್ರಲ್ಲ, ಅದೇ ಸಮಾಧಾನ’ ಎಂದೆ.

‘ಅಷ್ಟೇ ಅಲ್ಲ… ನಮ್ಮದೇ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣ ನಿರ್ಮಿಸತೀವಿ ಅಂದಾರೆ. ನಾವೀಗ ಆಕಾಶಕ್ಕೇ ಏಣಿ ಹಾಕೋರು!’ ಎಂದಿತು ಹೆಮ್ಮೆಯಿಂದ.

‘ನೆತ್ತಿ ಮ್ಯಾಗೆ ಸೂರಿಲ್ಲದ ಲಕ್ಷಗಟ್ಟಲೆ ಮಂದಿಗೆ ಸೂರು ಮಾಡೂದು ಬಿಟ್ಟು, ಆಕಾಶದಾಗೆ ನಿಲ್ದಾಣ ಎದಕ್ಕೆ ಬೇಕಲೇ? ಸಂಶೋಧನೆ ಮಾಡೂದಿದ್ದರೆ ಎಲ್ಲ ದೇಶದವ್ರಿಗೂ ಸೇರಿದ ಬಾಹ್ಯಾಕಾಶ ನಿಲ್ದಾಣದಾಗೇ ಮಾಡಬೌದು’ ಎಂದೆ.

‘ನೀ ಭಯಂಕರ ನ್ಯಾರೋಮೈಂಡೆಂಡ್‌ ಇದ್ದಿ! ಶುಭಾಂಶು ಶುಕ್ಲಾನಂಗೆ ನಮ್ಮೋರು ನೂರಾರು ಮಂದಿ ಗಗನಯಾನ ಮಾಡತಾರೆ. ಹಿಂಗಾಗಿ ಆಕಾಶದಾಗೆ ಸ್ವಂತ ಸೂರು ಬೇಕು’ ಎಂದು ಗುರುಗುಟ್ಟಿ, ಎದೆಯುಬ್ಬಿಸಿತು!  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.