
ಹೊಸ ನ್ಯೂಸ್ ಚಾನೆಲ್‌ಗೆ ವರದಿಗಾರರ ಸಂದರ್ಶನ ನಡೀತಿತ್ತು. ಹರಟೆಕಟ್ಟೆ ಕಾಯಂ ಸದಸ್ಯ ಗುಡ್ಡೆ ಹಾಜರಾಗಿದ್ದ.
ಸಂದರ್ಶಕರು ಕೇಳಿದರು: ‘ಗುಡ್ಡೆಯವರೇ ಈ ರಾಜಕೀಯ ಅಂದ್ರೇನು?’
‘ಹುಚ್ಚಾಸ್ಪತ್ರೆ ಸಾ...’ ಫಟ್ ಅಂತ ಹೇಳಿದ ಗುಡ್ಡೆ.
‘ವ್ಹಾಟ್! ಏನ್ರಿ ಹಾಗಂದ್ರೆ?’
‘ಅಲ್ಲ, ರಾಜಕೀಯದೋರು ಪರಸ್ಪರ ಬೈಕೊಳೋದು ಹಂಗೇ ಅಲ್ವ ಸಾ, ಮಾತೆತ್ತಿದ್ರೆ ಅವ್ರನ್ನ ಇವ್ರು, ಇವ್ರನ್ನ ಅವ್ರು ನಿಮ್ಹಾನ್ಸ್‌ಗೆ ಸೇರಿಸಬೇಕು ಅಂತಿರ್ತಾರಲ್ಲ, ಅದ್ಕೇ ಹಾಗಂದೆ...’
‘ಓ, ಹಾಗಾ... ಸರಿ, ಈಗ ಕರ್ನಾಟಕದ ಹೊಸ ಸಿಎಂ ಯಾರಾಗಬಹುದು?’
‘ಈಗಿನ ಪರಿಸ್ಥಿತಿ ನೋಡಿದ್ರೆ ನಾನೂ ಆಗಬೋದು ಸಾ...’ ಗುಡ್ಡೆ ನಕ್ಕ.
‘ಒಳ್ಳೆ ಆಸಾಮಿ ಕಣ್ರಿ, ಈಗ ಡಿಕೆಶಿ ಸಾಹೇಬ್ರು ನಾನು ಸಾಮಾನ್ಯ ಕಾರ್ಯಕರ್ತನಾಗೇ ಇರ್ತೀನಿ ಅಂದ್ರೆ ಏನರ್ಥ?’
‘ಸಿಎಂ ಕುರ್ಚಿ ಎಲ್ಲೋ ಮಿಸ್ ಹೊಡೀತಿದೆ ಅಂತ ಅರ್ಥ...’
‘ಜಾರಕಿಹೊಳಿ ಸಾಹೇಬ್ರು ಸಿಎಂ ಬದಲಾಗಬಹುದು, ಆಗದೇ ಇರಬಹುದು ಅಂದ್ರಲ್ಲ ಯಾಕೆ?’
‘ಸಿಎಂ ಕುರ್ಚಿ ಬಗ್ಗೆ ಅವರಿಗೆ ಏನೋ ಸುಳಿವು ಸಿಕ್ಕಿದೆ ಅಂತ ಅರ್ಥ...’
‘ಈಗ ಇದ್ದಕ್ಕಿದ್ದಂತೆ ಅಹಿಂದ ಸಮಾವೇಶ ಮಾಡ್ತಿರೋದ್ಯಾಕೆ?’
‘ಇರೋ ಸಿಎಂ ಕುರ್ಚಿನ ಇನ್ನಷ್ಟು ಭದ್ರ ಮಾಡೋಕೆ... ಅಹಿಂದ ಅನ್ನೋ ಸಿಮೆಂಟ್..!’
‘ವೆರಿಗುಡ್... ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಾಹೇಬ್ರು ಫೆಬ್ರುವರೀಲಿ ರಾಜ್ಯ ಪ್ರವಾಸ ಮಾಡ್ತಿರೋದ್ಯಾಕೆ?’
‘ಅದೂ ಕುರ್ಚಿ ಭದ್ರ ಮಾಡ್ಕಳೋ ಪ್ಲಾನೇ... ಸಿಮೆಂಟ್ ಬೇರೆ...’
‘ಕೊನೇ ಪ್ರಶ್ನೆ, ದ್ವೇಷ ಭಾಷಣಕ್ಕೆ ಸಮಾನಾರ್ಥಕ ಪದ ಏನು?’
‘ಬಿಜೆಪಿಯವರ ಪ್ರಕಾರ ರಾಹುಲ್ ಗಾಂಧಿಯವರ ವಿದೇಶ ಭಾಷಣ!’
‘ಯೂ ಆರ್ ಸೆಲೆಕ್ಟೆಡ್..!’ ಎಂದರು ಸಂದರ್ಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.