
‘ಏನೇ ಅನ್ನು... ನಮ್ ಕಮಲಕ್ಕನ ಮನಿ ವ್ಯವಹಾರನೇ ಛಂದ’ ಬೆಕ್ಕಣ್ಣ ಭಲೇ ಅಭಿಮಾನದಿಂದ ನುಡಿಯಿತು.
ನಾನು ವ್ಯವಹಾರ ಏನೆಂದು ಅರ್ಥವಾಗದೇ ಹುಬ್ಬೇರಿಸಿದೆ.
‘ಪ್ರಧಾನಿ ಕುರ್ಚಿ ಗದ್ಲನೇ ಇಲ್ಲ. 2035ರವರೆಗೂ ನಮ್ ಮೋದಿಮಾಮನೇ ಪ್ರಧಾನಿ ಅಂತ ಎಲ್ಲಾರೂ ಒಪ್ಪಿಕೊಂಡಾರೆ!’ ಬೆಕ್ಕಣ್ಣ ವಿವರಿಸಿತು.
‘ಅಷ್ಟೇ ಯಾಕೆ... ಯಾರು ಕೇಂದ್ರ ಗೃಹಮಂತ್ರಿ, ಯಾರು ಅರ್ಥ ಸಚಿವರು ಅಂತ ಕೂಡ ಎಲ್ಲಾರೂ ಒಪ್ಪಿಕೊಂಡಂತೆ ಕಾಣತೈತಿ. ಕಮಲಕ್ಕನ ಮನಿ = ಕುರ್ಚಿ ಸ್ಪಷ್ಟತೆ!’ ಎಂದು ನಾನು ಸಮೀಕರಣ ಹೊಸೆದೆ.
‘ಹೌದು... ಎಲ್ಲ ಖುಲ್ಲಂಖುಲ್ಲ! ರಾಜ್ಯಗಳಲ್ಲಿ ಬ್ಯಾರೆ ಪಕ್ಷದ ಜೊತಿಗಿ ಕಮಲಕ್ಕ ಕೈಜೋಡಿಸಿದಾಗಲೂ ಯಾರು ಸಿಎಂ ಅನ್ನೂದರ ಬಗ್ಗೆ ವಿವಾದನೇ ಇರಂಗಿಲ್ಲ’ ಎಂದು ಬೆಕ್ಕಣ್ಣ ಹುರುಪಿನಿಂದ ಹೇಳಿತು.
‘ಮಹಾರಾಷ್ಟ್ರದಾಗೆ ಸಿಎಂ ಫಡ್ನವೀಸ್, ಬಿಹಾರದಾಗೆ ಸಿಎಂ ನಿತೀಶ್... ಸಿಎಂ ಕುರ್ಚಿಗೆ ಬ್ಯಾರೆ ಯಾರೂ ಟುವಾಲ್ ಹಾಕಂಗಿಲ್ಲ!’ ಎಂದೆ.
‘ಇಲ್ಲಿ ಕೈಪಾಳೆಯದ ಸಿಎಂ ಕುರ್ಚಿ ಗದ್ಲ ಮುಗಿಯಂಗೇ ಕಾಣಂಗಿಲ್ಲ. ನಾವಿಬ್ಬರೂ ಛಲೋನೆ ಅದೀವಿ, ನಾನೇ ಸಿಎಂ ಅಂತ ಸಿದ್ದು ಅಂಕಲ್ ಕೈತಟ್ಟತಾರೆ. ಹೈಕಮಾಂಡಿನ ಕಮಾಂಡ್ ಮೀರಂಗಿಲ್ಲ ಅಂತ ಹೇಳ್ತಲೇ ಡಿಕೆಶಿ ಅಂಕಲ್ಲು ನನಗೆ ಹೂ ಪ್ರಸಾದ ಆಗೈತಿ ಅಂತ ಖುಷಿಯಾಗಿ ಬೀಗುತಾರೆ’ ಎಂದು ಬೆಕ್ಕಣ್ಣ ನಕ್ಕಿತು.
‘ಇವ್ರಿಬ್ಬರ ಕುರ್ಚಿ ಗದ್ಲದಲ್ಲಿ ಬಡವಾಗೋದು ಅಂದ್ರ ಶ್ರೀಸಾಮಾನ್ಯ! ಕರ್ನಾಟಕ ಇಡೀ ದೇಶದಲ್ಲೇ ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಾಗೈತೆ. ಈ ಎರಡೂವರೆ ವರ್ಷದಾಗೆ 2,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾರೆ’ ಎಂದೆ ನಾನು ಸಿಟ್ಟಿನಿಂದ.
‘ಇವ್ರು ಎಷ್ಟರೆ ನಾಚಿಕೆ ಬಿಟ್ಟಿರತಾರೆ ಅಂದರೆ, ಪಕ್ಕದ ಮಹಾರಾಷ್ಟ್ರದಾಗೆ ಡಬ್ಬಲ್ ಎಂಜಿನ್ ಇದ್ರೂ ನಾಕು ಸಾವಿರದ ಮ್ಯಾಲೆ ರೈತರು ಆತ್ಮಹತ್ಯೆ ಮಾಡಿಕೊಂಡು ಮೊದಲನೆ ಸ್ಥಾನದಾಗೆ ಅದಾರಲ್ಲ ಅಂತ
ವಾದಿಸತಾರೆ!’ ಎಂದ ಬೆಕ್ಕಣ್ಣನ ಜೊತೆ ನಾನೂ ಹಣೆ ಚಚ್ಚಿಕೊಂಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.