ADVERTISEMENT

ಚುರುಮುರಿ: ಸೆರೆಮನೆ–ಅರಮನೆ

ಗುರು ಪಿ.ಎಸ್‌
Published 12 ನವೆಂಬರ್ 2025, 23:30 IST
Last Updated 12 ನವೆಂಬರ್ 2025, 23:30 IST
   

‘ಏನ್ರೀ ನೀವು, ಇನ್ನೂ ಮಕ್ಕಳ ಫೀಸ್‌ ಕಟ್ಟಿಲ್ವಂತೆ, ಶಾಲೆಯವರು ಫೋನ್ ಮಾಡಿದ್ರು. ಈ ತಿಂಗಳು ರೇಷನ್ ಕೂಡ ತಂದಿಲ್ಲ ನೀವು’ ಬೆಳ್ ಬೆಳಿಗ್ಗೆಯೇ ಹೆಂಡತಿಯ ಸುಪ್ರಭಾತ ಶುರುವಾಯಿತು. 

‘ನಿಮ್ಮನ್ನ ಮದುವೆ ಆಗೋಕಿಂತ ಕಳ್ಳನ್ನ ಮದುವೆ ಆಗಿದ್ರೂ ಸುಖವಾಗಿರ್ತಿದ್ದೆ ನಾನು’ ವಟಗುಟ್ಟತೊಡಗಿದಳು. 

‘ಹೌದು, ನಾನೂ ಅದೇ ಯೋಚನೆ ಮಾಡ್ತಿದ್ದೆ’.

ADVERTISEMENT

‘ಅಂದ್ರೆ?’ 

‘ಕಷ್ಟಪಟ್ಟು ದುಡಿಯೋ ಬದಲು ಕಳ್ಳನಾದರೂ ಆಗಬಹುದಿತ್ತು ಅಂತ’ ಎಂದೆ ಒಗಟಿನ ರೂಪದಲ್ಲಿ.

‘ಜೈಲಿನಲ್ಲಿ ಪೊಲೀಸರಿಂದ ಒದೆ ತಿನ್ನೋಕೆ ಆಸೇನಾ?’ 

‘ಯಾವ ಕಾಲದಲ್ಲಿದ್ದೀಯಮ್ಮ ನೀನು. ಈಗ ಜೈಲುಗಳೆಲ್ಲ ರೆಸಾರ್ಟ್ ರೀತಿ ಆಗಿವೆ ಗೊತ್ತಾ ? ಟಿ.ವಿ, ಫ್ರಿಡ್ಜ್‌, ಸ್ಮಾರ್ಟ್ ಫೋನ್, ಗುಂಡು–ತುಂಡು ಎಲ್ಲ ಸಿಗುತ್ತೆ’.

‘ಅದೆಲ್ಲ ವಿಐಪಿಗಳಿಗೆ ಮಾತ್ರ’.

‘ವಿಐಪಿಗಳು ಅಂದ್ರೆ, ರಾಜಕಾರಣಿಗಳಾ?’ 

‘ಅಲ್ಲ. ವೆರಿ ಇಂಪಾರ್ಟೆಂಟ್ ಪ್ರಿಸನರ್‌ಗಳಿಗೆ ಅಂತ. ನೀವು ಜೈಲೊಳಗೆ ಪ್ರಭಾವಿಗಳಾಗಿರಬೇಕೆಂದರೆ, ಜೈಲು ಹೊರಗಿನ ಪ್ರಭಾವಿಗಳ ಜೊತೆ ಟಚ್‌ನಲ್ಲಿರಬೇಕು’.

‘ಜೈಲೊಳಗೆ ಹೋದ ಮೇಲೆ ಪ್ರಭಾವಿ ಆಗ್ತೀನಿ ಬಿಡು, ಪ್ರಭಾವಿ+ಪ್ರಭಾವಿ= ಪ್ರಭಾವಿ ಪ್ರೊ ಮ್ಯಾಕ್ಸ್. ಅದೂ ಅಲ್ಲದೆ, ಜೈಲಿಗೆ ಹೋಗಿ ಬಂದ ಮೇಲೆ ಎಷ್ಟೋ ಜನರಿಗೆ ಅದೃಷ್ಟ ಖುಲಾಯಿಸಿದೆ. ಎಷ್ಟೋ ರಾಜಕಾರಣಿಗಳು ಎಲೆಕ್ಷನ್ ಗೆದ್ದು ದೊಡ್ ದೊಡ್ಡ ಪೊಸಿಷನ್‌ಗೆ ಏರಿದಾರಲ್ವ?’ 

‘ಒಟ್ಟಿನಲ್ಲಿ, ನೀವೀಗ ಸೆರೆಮನೆ ಸೇರಬೇಕು. ಆದರೆ, ಹೇಗೆ ಅನ್ನೋದೇ ಪ್ರಶ್ನೆ’ ಎಂದಳು ಕಿಚಾಯಿಸುತ್ತ. 

‘ಏನಿಲ್ಲ, ಪಾಸ್‌ವರ್ಡ್ ಸಹಿತ ನನ್ನ ಮೊಬೈಲ್ ಫೋನ್ ನಿನ್ನ ಕೈಗೆ ಕೊಡ್ತೀನಿ. ಆಗ, ಗ್ಯಾರಂಟಿ ನೀನು ನನಗೆ ಹೊಡೆದೇ ಹೊಡಿತೀಯ’.

‘ಆಗ ನಾನು ಜೈಲಿಗೆ ಹೋಗಬೇಕಾಗುತ್ತಲ್ಲ’.

‘ನೀನೂ ಜೈಲಿಗೆ ಬಂದರೆ ಅದೆಂಥದೇ ಲಕ್ಷುರಿ ಸೆರೆಮನೆಯಾದರೂ ಅದು ನನಗೆ ಬೇಡ. ಮಕ್ಕಳ ಜೊತೆ ನಾನು ಮನೇಲಿ ಇರ್ತೀನಿ, ನೀನು ಜೈಲಲ್ಲಿ ಕೂಲಿ ಮಾಡಿ ಪ್ರತಿ ತಿಂಗಳು ದುಡ್ಡು ಕಳಿಸಿಬಿಡು’ ಎಂದೆ ನಗುತ್ತಾ. 

ಸೌಟಿನ ಏಟು ಜೋರಾಗೇ ಬಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.