ADVERTISEMENT

ಚುರುಮುರಿ: ಸಂಕ್ರಾಂತಿ ಸಂಕಲ್ಪ

ಮಣ್ಣೆ ರಾಜು
Published 13 ಜನವರಿ 2021, 19:31 IST
Last Updated 13 ಜನವರಿ 2021, 19:31 IST
   

‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಮಂತ್ರ ಜಪಿಸುತ್ತಾ ಭಕ್ತ ಬಳಗ ಸರ್ಕಾರಿ ದೇವಸೌಧ ಪ್ರವೇಶಿಸಿತು.

ಒಳಗೆ ಸರ್ಕಾರಿ ದೇವರು ಈ ಸಾಲಿನ ಬಜೆಟ್ ಸಿದ್ಧತೆಯ ಧ್ಯಾನದಲ್ಲಿದ್ದರು. ಆಯ ಎಷ್ಟು ಬರಬಹುದು, ವ್ಯಯ ಎಷ್ಟು ಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ತಲೆಕೆಡಿಸಿಕೊಂಡಿದ್ದರು. ಕೂಡಿ-ಕಳೆದು, ಗುಣಿಸಿ-ಭಾಗಿಸಿದರೂ ಲೆಕ್ಕ ಪಕ್ಕಾ ಆಗದೆ, ದೇವರ ಪಾಲಿಗೆ ಗಣಿತವು ಅಗಣಿತವಾಗಿತ್ತು.

ನಮಸ್ಕರಿಸಿದ ಭಕ್ತರು, ‘ದೇವ್ರೇ, ನಮ್ಮ ಕಷ್ಟ ಪರಿಹರಿಸಿ’ ಎಂದು ಕೈ ಮುಗಿದರು.

ADVERTISEMENT

ಕಡತದಿಂದ ಕಣ್ತೆಗೆದು ಭಕ್ತರತ್ತ ದೃಷ್ಟಿ ಹರಿಸಿದ ದೇವರು, ‘ಕೇಳಿ, ಏನು ವರ ಬೇಕು?’ ಎಂದರು.

‘ವರ ಬೇಡ ದೇವ್ರೂ, ದಾನ ಮಾಡಿ, ಅನುದಾನ ನೀಡಿ...’ ಕೋರಿಕೆ ಸಲ್ಲಿಸಿದರು.

‘ನಿಮ್ಮ ಅನುದಾನವನ್ನು ಕೊರೊನಾ ನುಂಗಿ ನೀರು ಕುಡಿದಿದೆ, ಇನ್ನೆಲ್ಲಿ ಅನುದಾನ...?’

‘ಅನುದಾನವಿಲ್ಲದೆ ಬರಿ ಕೈಯಲ್ಲಿ ಕ್ಷೇತ್ರಗಳಿಗೆ ಹೋಗಿ ಪ್ರಜೆಗಳಿಗೆ ಮುಖ ತೋರಿಸಲಾಗುತ್ತಿಲ್ಲ.
ರಸ್ತೆಗೆ ಟಾರ್ ಇಲ್ಲ, ಕುಡಿಯಲು ನೀರಿಲ್ಲ. ಶಂಕುಸ್ಥಾಪನೆ, ಉದ್ಘಾಟನೆಗಳಿಲ್ಲ...’ ಕಷ್ಟ ಹೇಳಿಕೊಂಡರು ಭಕ್ತರು.

‘ಕೊರೊನಾ ಕಾಟ ಮುಗಿಯೋವರೆಗೂ ಅನುದಾನ ಕಷ್ಟ, ಅಲ್ಲಿಯವರೆಗೂ ಸಮಾಧಾನ, ವ್ಯವಧಾನ ಕಾಪಾಡಿಕೊಳ್ಳಿ’.

‘ಸಂಕ್ರಾಂತಿ ಹಬ್ಬದ ಕೊಡುಗೆ ಕೊಡಿ ದೇವ್ರೇ’.

‘ತಗೊಳ್ಳಿ ಸಂಕ್ರಾಂತಿಯ ಎಳ್ಳುಬೆಲ್ಲ, ಇದನ್ನು ತಿಂದು ಕೊರೊನಾಗೆ ಎಳ್ಳುನೀರು ಬಿಡುವ ಸಂಕಲ್ಪ ಮಾಡಿ’ ಎಂದು ಕೊಟ್ಟರು.

‘ಅಂದರೆ, ಕ್ಷೇತ್ರದ ಪ್ರಜೆಗಳಿಗೆ ನಾವೂ ಎಳ್ಳುಬೆಲ್ಲ ಹಂಚಬೇಕೆ ದೇವ್ರೇ?’

‘ಬೇಡ, ನಾವು ಕೋವಿಡ್ ಲಸಿಕೆ ವಿತರಿಸುತ್ತೇವೆ, ನೀವು ಅದರ ಸದ್ಬಳಕೆ ಮಾಡಿ
ಕೊಂಡು, ನಿಮ್ಮ ಕ್ಷೇತ್ರವನ್ನು ಕೊರೊನಾಮುಕ್ತ ಮಾಡಬೇಕು. ಕ್ಷೇತ್ರದ ನೆಗೆಟಿವ್ ರಿಪೋರ್ಟ್ ತಂದವರಿಗೆ ಬಹುಮಾನವಾಗಿ ಅನುದಾನ ನೀಡುತ್ತೇನೆ...’ ಎಂದು ಹೇಳಿ ದೇವರು ಕಡತಗಳ ನಡುವೆ ಮುಳುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.