ADVERTISEMENT

ಪೆಕ್ರಣ್ಣ ಮತ್ತು ಸಖಿಯರು!

ರಾಹುಲ ಬೆಳಗಲಿ
Published 12 ಡಿಸೆಂಬರ್ 2018, 19:55 IST
Last Updated 12 ಡಿಸೆಂಬರ್ 2018, 19:55 IST
   

ಉದ್ಯಮಿ ವಿಜಯ ಮಲ್ಯ ಅವರನ್ನು ಲಂಡನ್‌ನಿಂದ ಗಡಿಪಾರು ಮಾಡಿ ಅಂತ ಕೋರ್ಟ್‌ ಹೇಳಿದ ವಿಷಯ ಕೇಳಿ ಪ್ರಧಾನಿ ಖುಷಿಯಾದರೋ ಇಲ್ವೊ ಗೊತ್ತಿಲ್ಲ. ಸಾಲ ಮರುಪಾವತಿ ಆಗುವುದೆಂದು ಬ್ಯಾಂಕ್‌ನವರಲ್ಲಿ ಆಶಾಭಾವ ಮೂಡಿದೆಯೋ ಇಲ್ವೊ ತಿಳಿದಿಲ್ಲ.

ಆದರೆ ನಮ್ಮ ಜಿಗ್ರಿ ದೋಸ್ತ್ ಪೆಕ್ರಣ್ಣನ ಮೊಗದಲ್ಲಿ ಮಂದಹಾಸ ಕಂಡಿದ್ದಂತೂ ದಿಟ. ಕಾರಣ, ಕಿಂಗ್‌ಫಿಷರ್ ಸಖಿಯರನ್ನು ನೋಡುವ, ಅವರೊಂದಿಗೆ ವಿಮಾನವೇರುವ ಬಹುದಿನಗಳ ಆತನ ಕನಸು ಮತ್ತೆ ಮೊಳಕೆಯೊಡೆದಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ಮೆಸೇಜ್ ಬಂದ್ರೆ ಸಾಕು ಪ್ರಯಾಣಿಕರನ್ನು ಕಾರಿನಲ್ಲಿ ಹತ್ತಿಸಿಕೊಂಡು ರೊಂಯ್ಯನೆ ಪೆಕ್ರಣ್ಣ ಹೊರಟು
ಬಿಡುತ್ತಿದ್ದ. ಪ್ರಯಾಣಿಕರು ಕಾರು ಇಳಿದು ವಿಮಾನವೇರಿದರೂ ಆತ ಮಾತ್ರ ಅಲ್ಲೇ ಠಿಕಾಣಿ.

ADVERTISEMENT

‘ಕೆಂಪು ಮತ್ತು ಬಿಳಿ ಉಡುಪಿನಲ್ಲಿನ ಗಗನಸಖಿಯರನ್ನು ನೋಡೋದೆ ಖುಷಿ ಕಣ್ಲಾ. ಕಾರು ಡ್ರೈವರ್ ಬದಲು ವಿಮಾನ ಪೈಲಟ್ ಆಗಿದ್ದರೆ, ನಿತ್ಯ ಅವರೊಂದಿಗೆ ವಿಮಾನದಲ್ಲಿ ಹೋಗಬಹುದಿತ್ತು’ ಎಂದು ಹೇಳಿ ನೊಂದು
ಕೊಳ್ಳುತ್ತಿದ್ದ ಪೆಕ್ರಣ್ಣ.

ಮಲ್ಯ ಸಾಲ ತೀರಿಸಲಾಗದೆ ದಿಢೀರನೆ ವಿದೇಶಕ್ಕೆ ಹಾರಿ ಹೋದಾಗಲಂತೂ ಪೆಕ್ರಣ್ಣ ಉಗ್ರ ಅವತಾರ ತಳೆದುಬಿಟ್ಟ. ಸಂಬಳವಿಲ್ಲದೆ ಗಗನಸಖಿಯರು ಕಣ್ಣೀರು ಹಾಕಿದ್ದು ಕಂಡು ಆತನಿಗೆ ಸಹಿಸಲು ಆಗಲಿಲ್ಲ.

‘ಮಲ್ಯ ಭಾರತಕ್ಕೆ ಬಂದು, ಬ್ಯಾಂಕುಗಳ ಸಾಲ ಪಾವತಿಸಿ, ಪುನಃ ವಿಮಾನ ಹಾರಾಟ ಆರಂಭಿಸಿಬಿಟ್ಟರೆ, ಜಗತ್ತಿನಲ್ಲಿ ನನ್ನಷ್ಟು ಖುಷಿಯ ಮನುಷ್ಯ ಯಾರೂ ಇಲ್ಲ’ ಎಂದು ಪೆಕ್ರಣ್ಣ ಟಿ.ವಿ.ಯಲ್ಲಿ ಸುದ್ದಿ ನೋಡಿ ಬಂದು ನಮಗೆ ಹೇಳಿದ.

ಆತನದ್ದು ಪುಟ್ಟ ಆಸೆಯಿದೆ. ‘ದೂರದ ಆಸ್ಟ್ರೇಲಿಯಾ, ಅಮೆರಿಕಗೆ ಹೋಗಲಂತೂ ಆಗಲ್ಲ. ನಮ್ಮ ಪಾಲಿಗೆ ಗೋವಾನೇ ಸಿಡ್ನಿ. ಗೋವಾಕ್ಕೆ ಹೋಗುವ ಕಿಂಗ್‌ಫಿಷರ್ ವಿಮಾನವೇರಿ, ಗಗನಸಖಿಯರ ಜತೆ ಸೆಲ್ಫಿ ತೆಗೆದುಕೊಳ್ಳಬೇಕು. ಆಕೆ ಐದೂವರೆ–ಆರು ಅಡಿ ಎತ್ತರವಿದ್ದರೂ ನಾನು ಕುಳ್ಳನಾದರೂ ಸರಿಯೇ, ಜೂಮ್ ಮಾಡಿ ಸೆಲ್ಫಿ ತೆಗೆದುಕೊಳ್ಳುವೆ’ ಎಂದು ಪೆಕ್ರಣ್ಣ ಹೇಳುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.