ಹನ್ನೊಂದು ವರ್ಷಗಳ ನಂತರ ಮಂತ್ರಿಯೊಬ್ಬರು, ‘ಆಯ್ದ’ ಪತ್ರಕರ್ತರಿಗೆ ಸಂದರ್ಶನ ನೀಡುವ ಮನಸು ಮಾಡಿದರು.
ನ್ಯೂಸ್ ಚಾನೆಲ್ ಒಂದರ ಎಡಿಟರ್ ಕಮ್ ಆ್ಯಂಕರ್‌ಗೆ ಮೊದಲ ಅವಕಾಶ ಕೊಟ್ಟರು. ವಿನಯವೇ ಮೈವೆತ್ತಂತಿದ್ದ ಆ್ಯಂಕರ್ ಪ್ರಶ್ನೆ ಕೇಳಲಾರಂಭಿಸಿದರು.
‘ಸಾರ್, ನೇಪಾಳದಲ್ಲಾದ ಯುವಕ್ರಾಂತಿ ಬಗ್ಗೆ ಏನ್ ಹೇಳ್ತೀರಾ?’
‘ಏನ್ ಹೇಳೋದು, ಅದೊಂದು ಘಟನೆ ಅಷ್ಟೇ’.
‘ಅಲ್ಲ, ಕ್ಷಿಪ್ರಕ್ರಾಂತಿಗೆ ಕಾರಣ ಏನಿರಬಹುದು ಅಂತ?’
‘ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಸ್ವಜನಪಕ್ಷಪಾತ ಮೇರೆ ಮೀರಿತ್ತು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಜನ ಬಡವರಾಗ್ತಾ ಇದ್ರು, ರಾಜಕಾರಣಿಗಳು ಶ್ರೀಮಂತರಾಗ್ತಾ ಇದ್ರು’ ವಿವರಿಸತೊಡಗಿದರು ಸಾಹೇಬ್ರು.
‘ಸಾರ್, ಇದನ್ನೆಲ್ಲ ನೀವು ಯಾವ ದೇಶದ ಬಗ್ಗೆ ಹೇಳಿದ್ದು?’ ಆ್ಯಂಕರ್‌ನ ಮುಗ್ಧ ಪ್ರಶ್ನೆ!
ಕೆಳಗಿನಿಂದ ಮೇಲಿನವರೆಗೆ ನೋಡಿದ ಮಂತ್ರಿವರ್ಯರು, ‘ನೇಪಾಳದ ಬಗ್ಗೆ ರೀ, ಅಷ್ಟೂ ಗೊತ್ತಾಗಲ್ವ’ ಎಂದು ಗದರಿದರು.
‘ಅಯ್ಯೋ, ಇವರ ಮನಸ್ಸಿಗೆ ನೋವು ಮಾಡಿಬಿಟ್ಟೆನೇ’ ಎಂದು ಕೈಕೈ ಹಿಸುಕಿಕೊಂಡು, ‘ಸಾರ್, ನೇಪಾಳದಲ್ಲಿ ಸೋಷಿಯಲ್ ಮೀಡಿಯಾದವರು, ಯೂಟ್ಯೂಬರ್‌ಗಳು ಜನರ ತಲೆ ಕೆಡಿಸಿದ್ದರಿಂದ ಅಷ್ಟೆಲ್ಲ ರಾದ್ಧಾಂತ ಆಗಿದೆ. ನಮ್ ದೇಶದಲ್ಲಿ ಇದೆಲ್ಲ ಆಗೋ ಮೊದಲೇ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿಬಿಡಿ ಸಾರ್’ ಎಂದು ಆ್ಯಂಕರ್ ಮೆಚ್ಚುಗೆಯ ನಿರೀಕ್ಷೆಯಲ್ಲಿ ಸಾಹೇಬರತ್ತ ನೋಡಿದರು.
‘ಏನ್ ಮಾತಾಡ್ತಿದೀರಿ... ಸೋಷಿಯಲ್ ಮೀಡಿಯಾ ಇದ್ದರೆ ಅದರಲ್ಲಿಯೇ ಪರ–ವಿರೋಧ ಚರ್ಚೆ ಮಾಡ್ತಾ, ಜಗಳ ಮಾಡ್ತಾ, ಒಬ್ಬರಿಗೊಬ್ಬರು ಬೈದಾಡಿಕೊಂಡು ಇರ್ತಾರೆ. ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೇ ಇಷ್ಟೆಲ್ಲ ಆಗಿರೋದು, ನಾನೂ ಅದೇ ತಪ್ಪು ಮಾಡಬೇಕು ಅಂತಿರೇನ್ರೀ...’
ಪಕ್ಕದಲ್ಲೇ ಇದ್ದ ಪಿ.ಎ ಮಧ್ಯದಲ್ಲಿ ಬಾಯಿ ಹಾಕಿ, ‘ಅಲ್ಲಿ, ಆಳುವವರ ಪರ ತುತ್ತೂರಿ ಊದುತ್ತಿದ್ದ, ಜನರನ್ನ ಜಾತಿ–ಧರ್ಮದ ಆಧಾರದಲ್ಲಿ ಎತ್ತಿಕಟ್ಟುತ್ತಿದ್ದ ಪತ್ರಕರ್ತರಿಗೂ ಗೂಸಾ ಬಿದ್ದಿವೆಯಂತೆ ಸಾರ್’ ಎಂದು ನಕ್ಕ.
ಮಂತ್ರಿ ಮತ್ತು ಆ್ಯಂಕರ್ ಮುಖ–ಮುಖ ನೋಡಿಕೊಂಡರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.