
‘ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೇನಿಲ್ಲ...’ ರಾಗವಾಗಿ ಹಾಡುತ್ತಾ ಹೊರಟಿತ್ತು ಪೆಂಗ್ವಿನ್‌ಗಳ ಹಿಂಡು. ಎಲ್ಲವೂ ದಕ್ಷಿಣದ ಪೆಂಗ್ವಿನ್‌ಗಳು. ರಾಜಕಾರಣವೇ ವಂಶವೃತ್ತಿ.
‘ಏನೇ ಹೇಳಿ, ನಮ್ಮ ಒಗ್ಗಟ್ಟು ಮುರಿಯೋಕೆ ಯಾರಿಂದಲೂ ಸಾಧ್ಯ ಇಲ್ಲ. ನಾವೆಲ್ಲರೂ ಬೇರೆ ಬೇರೆ ಪಾರ್ಟಿಯಲ್ಲಿದ್ದರೂ ನಮ್ ನಮ್ ಫ್ಯಾಮಿಲಿಯವರೆಲ್ಲ ಗೆದ್ದೇ ಗೆಲ್ತೀವಿ. ಒಗ್ಗಟ್ಟು ಅಂದ್ರೆ ನಾವು, ನಾವು ಅಂದ್ರೆ ಒಗ್ಗಟ್ಟು’ ವಯಸ್ಸಾಗಿರುವ ಪೆಂಗ್ವಿನ್ ಒಂದು ಆಲ್ ಪಾರ್ಟಿ ಮೀಟಿಂಗ್‌ನಲ್ಲಿ ಹೆಮ್ಮೆಯಿಂದ ಹೇಳಿತು.
‘ಗೆಲ್ಲೋದಷ್ಟೇ ಮುಖ್ಯ ಅಲ್ಲ. ಅಧಿಕಾರದಲ್ಲಿರೋದು ಮುಖ್ಯ. ಅಧಿಕಾರದಲ್ಲಿರೋದರ ಜೊತೆಗೆ ಯಾವ ಹುದ್ದೆಯಲ್ಲಿದೀವಿ, ಯಾವ ಹುದ್ದೆಯಲ್ಲಿರಬೇಕು ಅನ್ನೋದೂ ಮುಖ್ಯ’ ಸ್ಯಾಡ್ ಧ್ವನಿಯಲ್ಲಿ ಹೇಳಿತು ‘ಬಂಡೆ’ ಪೆಂಗ್ವಿನ್.
‘ಕರೆಕ್ಟ್, ಕರೆಕ್ಟ್’ ಮೋಟಿವೇಷನಲ್ ಸ್ಪೀಚ್ ಕೇಳಿ ಚಪ್ಪಾಳೆ ತಟ್ಟಿತು ವರುಣಾದ ಹಿರಿ ಪೆಂಗ್ವಿನ್‌ನ ಮರಿ ಪೆಂಗ್ವಿನ್.
ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ, ಕನಕಪುರದ ಬಂಡೆ ಪೆಂಗ್ವಿನ್, ಏಕಾಂಗಿಯಾಗಿ ಉತ್ತರದತ್ತ ಹೆಜ್ಜೆ ಹಾಕತೊಡಗಿತು. ಮೀಡಿಯಾದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಯಿತು.
‘ಹಿಂಡನ್ನು ಬಿಟ್ಟು, ಅದೊಂದೇ ಪೆಂಗ್ವಿನ್ ದೂರ ಹೋಗುತ್ತಿರುವುದೇಕೆ?’ ಫೇಸ್‌ಬುಕ್‌ನಲ್ಲಿ ಪ್ರಶ್ನೆಗಳ ಸುರಿಮಳೆ.
‘ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ...’ ಇನ್‌ಸ್ಟಾದಲ್ಲಿ ಇನ್‌ಸ್ಟಂಟ್ ಸಾಂಗ್ ಪ್ಲೇಯಾಗತೊಡಗಿತು.
‘ಉತ್ತರಕ್ಕಾಗಿ ಉತ್ತರದತ್ತ ಹೋಗುತ್ತಿರಬಹುದು’ ‘ಎಕ್ಸ್’ನಲ್ಲಿ ಅಂತೆ–ಕಂತೆಗಳ ಕಥೆ ಪ್ರಾರಂಭವಾಯಿತು.
‘ಕೊಟ್ಟ ಮಾತನು ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು...’ ಕನಕಪುರದ ಬಂಡೆ ಪೆಂಗ್ವಿನ್ ಪರ ಯೂಟ್ಯೂಬ್‌ನಲ್ಲಿ ಎಮೋಷನಲ್ ಸಾಂಗ್ ಕೇಳಿಬರತೊಡಗಿತು.
‘ನೋಡಿ, ಹೀಗೆ ಉತ್ತರಕ್ಕಾಗಿ ಪದೇ ಪದೇ ಉತ್ತರದತ್ತ ಬಂದರೆ, ಉತ್ತರವಲ್ಲ, ಪ್ರಶ್ನೆ ಕೇಳಲೂ ಅವಕಾಶವಿರದು’ ಕಡ್ಡಿಮುರಿದಂತೆ ಹೇಳಿತು ಹೈಕಮಾಂಡ್ ಪೆಂಗ್ವಿನ್.
‘ಇಲ್ಲ, ಇಲ್ಲ, ಬೇಕು ಅಂತ ಬಂದದ್ದಲ್ಲ. ದಾರಿ ತಪ್ಪಿ ಬಂದದ್ದು, ಹೋಗಲು ಮನಸುಂಟು, ಹೋಗುತ್ತೇನೆ’ ಎಂದು ದಕ್ಷಿಣದತ್ತ ಹೆಜ್ಜೆ ಹಾಕಿತು ಬಂಡೆ ಪೆಂಗ್ವಿನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.