ADVERTISEMENT

ಅಸಲಿ– ವಸೂಲಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:30 IST
Last Updated 30 ಸೆಪ್ಟೆಂಬರ್ 2020, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಕೋವಿಡ್‌ ಜಾಸ್ತಿ ಆಗ್ತಿದೆ, ಚಿಕಿತ್ಸೆ ಕೊಡೋಕೆ ತುಂಬಾ ಡಾಕ್ಟರ್‌‌ಗಳು ಬೇಕು ಅಂತಾರೆ. ಅಂತದ್ರಲ್ಲಿ ಮೈಸೂರ್‌ನಲ್ಲಿ 100ಕ್ಕೂ ಹೆಚ್ಚು ಜನ ಡಾಕ್ಟರ್ ಆಗೋ ಕಾರ್ಯಕ್ರಮನಾ ಪೊಲೀಸ್ರು ನಿಲ್ಲಿಸ್ಬಿಟ್ರಂತಲ್ಲಾ ಯಾಕೆ?’ ಅರ್ಕೇಸಿ ಪ್ರಶ್ನಿಸಿದ.

ಪಕ್ಕದಲ್ಲೇ ಕುಳಿತಿದ್ದ ಅಪದ್ದಣ್ಣ ‘ಅವರೆಲ್ಲ ಡಾಕ್ಟರ್ ಆಗೋರಲ್ಲ, ಗೌರವ ಡಾಕ್ಟರೇಟ್ ಪದವಿ ತಗೊಳಕ್ ಬಂದವ್ರಂತೆ’ ಅಂದ.

‘ಅಂದ್ರೆ ಗೌರವ ಡಾಕ್ಟರೇಟ್ ತಗೊಳಕ್ ಬಂದವ್ರಿಗೆ ಸಿಕ್ಕಿದ್ದು ಅಗೌರವ ಅಂತನ್ನು’.

ADVERTISEMENT

‘ಹೌದ್ಹೌದು, ಮುಂಚೆ ಆ ಡಾಕ್ಟರೇಟ್‌ನಲ್ಲಿ ಗೌರವವೇ ಮುಖ್ಯವಾಗಿತ್ತು. ಆದರೆ ಈಗೀಗ ಅದರಲ್ಲಿ ‘ರೇಟ್’ಗೇ ಪ್ರಾಶಸ್ತ್ಯ ಹೆಚ್ಚಿರೋದ್ರಿಂದ ಗೌರವಕ್ಕೆ ಬದಲಿಗೆ ಅಗೌರವ ಸಿಗ್ತಿದೆ’.

‘ಹಾಗಾದ್ರೆ ಅಲ್ಲಿಂದ ವಾಪಸ್‌ ಹೋದೋರೆಲ್ಲ ಪದವಿ ವಂಚಿತರು. ಅವರೆಲ್ಲ ಸೇರ್ಕಂಡು ಮಂತ್ರಿ ಪದವಿ ಆಕಾಂಕ್ಷಿಗಳಂತೆ ನಮಗೆ ಪದವಿ ಬೇಕೇ ಬೇಕೂಂತ ಪಟ್ಟು ಹಿಡಿದ್ರೆ?’

‘ಹಾಗ್ ಆಗಲ್ಲ. ಮಂತ್ರಿ ಪದವಿ, ಗೌರವ ಡಾಕ್ಟರೇಟ್ ಎರಡಕ್ಕೂ ಕಾಸು ಬಿಚ್ಚೋಕೆ ಜನ ತಯಾರಿರೋದೇನೋ ನಿಜ. ಅಲ್ಲದೆ ಎರಡೂ ವರ್ಗದವರು ನಾವೇನೂ ಕೊಟ್ಟಿಲ್ಲ ಅಂತಾನೇ ಹೇಳ್ತಾರೆ. ವ್ಯತ್ಯಾಸ ಅಂದ್ರೆ, ಮಂತ್ರಿ ಪದವಿ ಕೈ ತಪ್ಪಿದರೆ ತಿರುಗಿಬೀಳ್ತಾರೆ, ಆದ್ರೆ ಈ ಡಾಕ್ಟರೇಟ್ ತಪ್ಪಿದ್ರೆ ಮಾತ್ರ ಹಾಗ್ ಮಾಡಕ್ ಆಗದೇ ಒಳಗೊಳಗೇ ಪೇಚಾಡ್ತಾರೆ’.

‘ಈ ಗೌರವ ಡಾಕ್ಟರೇಟ್ ಇನ್ ಯಾರಿಗ್ ಕೊಡ್ತಾರೆ?’ ಕುತೂಹಲದಿಂದ ಕೇಳಿದ ಅರ್ಕೇಶಿ.

‘ಸಾಧನೆ ಮಾಡಿದವರಿಗೆ ಕೊಡುವುದು ಗೌರವ ಡಾಕ್ಟರೇಟ್‌. ಧನ ಮಾಡಿಕೊಳ್ಳಲೊಂದು ಸಾಧನವಾಗಿ ಕೊಟ್ಟರೆ ಅದು ಅಗೌರವ ಡಾಕ್ಟರೇಟ್. ಒಂದು ಅಸಲಿ, ಇನ್ನೊಂದು ವಸೂಲಿ!’

‘ಆದ್ರೂ ಕೆಲವ್ರು ಅದೇಕೆ ಇಂಥವುಗಳ ಹಿಂದೆ ಹೋಗ್ತಾರೋ?’ ಅರ್ಕೇಶಿ ಗರಂ ಆದ.

‘ಹೆಸರಿನ ಮುಂದೆ ಡಾ. ಬರುತ್ತದೆಂಬ ಆಸೆ ಕೆಲವರಿಗೆ’.

‘ಮತ್ತೆ ಹಣ ಕೊಟ್ಟವರ ಪಾಡು?’

‘ಗ್ರಾಜ್ಯುಯೇಷನ್ ಟೋಪಿ ಜೊತೆಗೆ ಮಕ್ಮಲ್ ಟೋಪಿಯನ್ನೂ ಹಾಕಿಸಿಕೊಂಡಂತಾಯ್ತು!’ ಅಂದ ಅಪದ್ದಣ್ಣ ತಲೆ ಮೇಲೆ ಟವೆಲ್ ಹಾಕಿಕೊಂಡು ಅಲ್ಲಿಂದ ಎದ್ದು ನಡೆದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.