ADVERTISEMENT

ಚುರುಮುರಿ: ಪಾರ್ಕಿಂಗ್ ಶುಲ್ಕ

ಸುಮಂಗಲಾ
Published 14 ಫೆಬ್ರುವರಿ 2021, 19:30 IST
Last Updated 14 ಫೆಬ್ರುವರಿ 2021, 19:30 IST
Churumuri-15-02-2021
Churumuri-15-02-2021   

ಬೆಳ್ಬೆಳಗ್ಗೆ ದಬದಬನೆ ಬಾಗಿಲು ಬಡಿದಿದ್ದು ಕೇಳಿ ಪರಮೇಶಿ ಕದ ತೆರೆದರೆ, ಮೂರನೇ ಕಣ್ಣು ತೆರೆದು ಸುಟ್ಟೇಬಿಡುವೆ ಎಂಬಂತೆ ಬಿಬಿಎಂಪಿ ಅಧಿಕಾರಿಯೊಬ್ಬರು ನಿಂತಿದ್ದರು. ‘ನಿಂದೇನಯ್ಯಾ ಈ ವೆಹಿಕಲ್ಲು... ಎಷ್ಟ್ ವರ್ಷದಿಂದ ರಸ್ತೇಲಿ ನಿಲ್ಲಿಸ್ತಿದ್ದೀಯ’ ಗತ್ತಿನಿಂದ ಕೇಳಿದರು.

ಪರಮೇಶಿಗೆ ನಾಲಿಗೆ ಒಣಗಿತು. ‘ಐದು ವರ್ಸದಿಂದ ಸಾ... ಮನೆ ಮಾಲೀಕರು ತಮ್ಮ ಕಾರು, ಬೈಕು, ಸೈಕಲ್ಲು ಎಲ್ಲ ವಳಗೆ ನಿಲ್ಲಿಸ್ತಾರೆ. ಜಾಗ ಇಲ್ಲಂತ ಅಲ್ಲಿ ನಿಲ್ಲಿಸಾದು. ರಾತ್ರಿ ಅಷ್ಟೇ ಸಾರ್... ಹಗಲೆಲ್ಲ ರಸ್ತೆ ಮ್ಯಾಲೆ ಇರ್ತೀನಿ... ಫುಡ್ ಡೆಲಿವರಿ’.

‘ಐದು ವರ್ಷದಿಂದ ಬಿಟ್ಟಿ ಪಾರ್ಕಿಂಗ್... ನೀವೆಲ್ಲ ಹಿಂಗೆ ಪಾರ್ಕಿಂಗ್ ಮಾಡದ್ರಿಂದನೇ ಬೆಂಗಳೂರಲ್ಲಿ ಇಷ್ಟು ಟ್ರಾಫಿಕ್’ ಅಧಿಕಾರಿ ಹ್ಞೂಂಕರಿಸಿದರು.

ADVERTISEMENT

‘ಸಾರ್... ಇದು ರೆಸಿಡೆನ್ಸಿಯಲ್ ಏರಿಯಾ, ಡೆಡ್ ಎಂಡ್’.

‘ಡೆಡ್ಡೋ ಲೈವೋ... ದಂಡದ ಜೊತೆ ಪಾರ್ಕಿಂಗ್ ಶುಲ್ಕ ತುಂಬಯ್ಯಾ’ ಎಂದು ಪರಪರನೆ ರಸೀದಿ ಹರಿದರು.

‘ಐಷಾರಾಮಿ ಕಾರು, ಲಕ್ಷಗಟ್ಟಲೆ ಲಂಚ, ನೂರಾರು ಆಫೀಸು ಕಡತ, ಸೀಲು ಎಲ್ಲ ಇಟ್ಕಂಡು ಕುಬೇರನಂಗೆ ಮೆರೀತಿದ್ದ
ದೇವೇಂದ್ರಪ್ಪನಂಥೋರನ್ನ ಬಿಟ್ಟು ಥರ್ಡ್ ಹ್ಯಾಂಡ್ ಲೊಟಗಾಸಿ ಲೂನಾ ನಿಲ್ಲಿಸಿದ್ದಕ್ಕೆ ಇಷ್ಟ್ ಶುಲ್ಕ ಹಾಕಿದೀರಲ್ಲ ಸಾರ್... ಇದು ನ್ಯಾಯಾನಾ...’ ಪರಮೇಶಿ ಅಲವತ್ತುಕೊಂಡ.

‘ಮನೆಗೆ, ಜಮೀನಿಗೆ ತಕ್ಕಂಡ ಸಾಲ ತೀರಿಸದಿದ್ದರೆ ಬ್ಯಾಂಕುಗಳು ಆಸ್ತಿ ಮುಟ್ಟು ಗೋಲು ಹಾಕ್ಕಳ್ತಾವೆ. ಆದ್ರೆ ಮಲ್ಯ, ನೀರವ್ ಮೋದಿಯಂಥವರ ಸಹಸ್ರಾರು ಕೋಟಿ ಬ್ಯಾಡ್ಲೋನ್ ವಸೂಲು ಮಾಡಕ್ಕಾಗದೇ ತಲೆ ಮ್ಯಾಗೆ ತಟ್ಟು ಹಾಕ್ಕಂಡು, ಈಗ ಬ್ಯಾಡ್‌ಬ್ಯಾಂಕ್‌ ಸ್ಥಾಪನೆ ಮಾಡ್ತಿದಾರಲ್ಲ, ಹಂಗೇ ಇದು. ನಾಳೆ ವಳಗೆ ಪಾರ್ಕಿಂಗ್ ಶುಲ್ಕ ತುಂಬದಿದ್ದರೆ ಗಾಡಿ ಎತ್ಹಾಕ್ಕೊಂಡು ಹೋಗ್ತೀವಿ’ ಎಂದು ರಸೀದಿ ಕೈಯಲ್ಲಿಟ್ಟು ಹೋದನಾತ.

ಮರುದಿನ ಬೆಳಗ್ಗೆ ಮನೆ ಬಾಗಿಲು ತೆರೆದ ಅಧಿಕಾರಿಗೆ ತಲೆ ತಿರುಗಿತು. ಪಾರ್ಕಿಂಗ್ ರಸೀದಿ ಮಾತ್ರವಲ್ಲದೆ ಟ್ರಾಫಿಕ್ ಪೊಲೀಸಿನವನು ಕೊಟ್ಟಿದ್ದ ಹತ್ತಾರು ದಂಡದ ಬಿಲ್ಲನ್ನೂ ಮಾಲೆ ಯಂತೆ ಧರಿಸಿಕೊಂಡು ಗೇಟಿನ ಮುಂದೆ ಪರಮೇಶಿಯ ಲೊಟಗಾಸಿ ಲೂನಾ ನಿಂತಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.