ADVERTISEMENT

ಚುರುಮುರಿ: ಚಾಣಾಕ್ಷ ಶ್ರೀಮತಿ!

ಎಸ್.ಬಿ.ರಂಗನಾಥ್
Published 3 ಡಿಸೆಂಬರ್ 2021, 19:45 IST
Last Updated 3 ಡಿಸೆಂಬರ್ 2021, 19:45 IST
ಚುರುಮುರಿ
ಚುರುಮುರಿ   

‘ವಿವಾದಿತ ಕೃಷಿ ಕಾಯ್ದೆಗಳನ್ನ ಚರ್ಚೆಯಿಲ್ಲದೆ ಹಿಂದಕ್ಕೆ ಪಡೆದದ್ದು ಸರಿಯಲ್ಲ ಅಂತಿದಾರಲ್ರೀ ನಮ್ಮ ಖರ್ಗೆ ಸಾಹೇಬ್ರು!’, ಗೃಹಸಚಿವೆ ಚರ್ಚೆ ಪ್ರಾರಂಭಿಸಿದರು.

‘ಅಲ್ದೆ, ವಿರೋಧ ಪಕ್ಷದೋರು ಬೆಂಬಲಿಸೋಕಾಗುತ್ತಾ?’.

‘ರಾಜ್ಯಸಭೆಯ 12 ಸದಸ್ಯರನ್ನ ಅಮಾನತುಗೊಳಿಸಿದಾರೆ... ಐವರು ಮಹಿಳೆಯರು’.

ADVERTISEMENT

‘ಅವ್ರೆಲ್ಲಾ ಕಳೆದ ಅಧಿವೇಶನದಲ್ಲಿ ದುರ್ವರ್ತನೆ ತೋರಿದೋರು’.

‘ಏನಪ್ಪಾ ದುರ್ವರ್ತನೆ?’

‘ಇವ್ರು ವರದಿಗಾರರ ಮೇಜಿನ ಮೇಲೆ ಹತ್ತಲು ಯತ್ನಿಸಿದವರು, ಮಾರ್ಷಲ್‌ಗಳೊಡನೆ ಹೊಡೆದಾಟಕ್ಕೆ ಹೋಗಿದ್ರೂಂತ ಆರೋಪ’.

‘ಸಾಕು ಬಿಡ್ರೀ, ಮಹಿಳೆಯರಿಂದ ಇದು ಸಾಧ್ಯವೇ? ಸಂಸತ್ತೇನು ಹೊಡೆದಾಟದ ತಾಣವೇ? ಹಾಗಿದ್ದಿದ್ರೆ, ಅನುಭವಿ ಸಂಸದ ಶಶಿ ತರೂರ್, ಕೆಲ್ಸ ಮಾಡಲು ಸಂಸತ್ತು ಆಕರ್ಷಕ ತಾಣ ಅಂತ ಹೇಳ್ತಿದ್ರಾ?’

‘ಅದು, ಆರು ಮಂದಿ ಸಂಸದೆಯರೊಂದಿಗೆ ಅವ್ರು ಸೆಲ್ಫಿ ತೆಗೆಸಿಕೊಂಡ ಜೋಶ್‌ನಲ್ಲಿ ಹೇಳಿದ ಮಾತು. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು’.

‘ಅಂತೂ, ಗಂಡಸರು ನಿಮ್ಮ ಅಸಲಿ ಬುದ್ಧೀನ ಅಲ್ಲಿಯೂ ಬಿಡೋಲ್ಲ ಅಲ್ವೇ?’

‘ಆ ಸಂಸದೆಯರ ಆಸಕ್ತಿಯಿಂದ್ಲೇ ಸೆಲ್ಫಿ ತೆಗೆದುಕೊಂಡದ್ದು, ಎಲ್ಲ ತಮಾಷೆಗಾಗಿ ಅಂತ ಹೇಳಿ ತರೂರ್ ಕ್ಷಮಾಪಣೆನೂ ಕೇಳಿದ್ರಲ್ಲಾ’.

‘ತರೂರ್ ದೃಷ್ಟೀಲಿ ಸಂಸದೆಯರು ಪಾರ್ಲಿ ಮೆಂಟನ್ನ ಆಕರ್ಷಕಗೊಳಿಸುವ ವಸ್ತುಗಳೇನ್ರೀ?’

‘ಆದ್ರೆ, ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ತರೂರರನ್ನ ಸಮರ್ಥಿಸಿಕೊಂಡಿದಾರಲ್ಲ?... ಅಲ್ದೆ, ತರೂರ್ ಮಾರನೇ ದಿನ ಪುರುಷ ಸಂಸದರೊಡನೆ ಸೆಲ್ಫಿ ತಗೊಂಡು ಟ್ವೀಟ್ ಮಾಡಿದ್ದು ವೈರಲ್ ಆಗ್ಲೇ ಇಲ್ಲ! ಎಲ್ಲಾ ಪುರುಷದ್ವೇಷಿಗಳು’.

‘ಹೌದ್ರೀ, ಶಶಿ ಅವ್ರದ್ದು ನಿಷ್ಪಕ್ಷಪಾತ ದೃಷ್ಟಿ. ಅಷ್ಟಕ್ಕೂ ನಮಗ್ಯಾಕೆ ತಲೆಬಿಸಿ ಬಿಡಿ’.

ಚರ್ಚೆ ತನಗೇ ಬೂಮರ‍್ಯಾಂಗ್ ಆಗುತ್ತಿದ್ದಂತೆ ಅದಕ್ಕೆ ತಾನೇ ಮಂಗಳ ಹಾಡಿದಳು, ನನ್ನ ಚಾಣಾಕ್ಷ ಶ್ರೀಮತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.