ADVERTISEMENT

ಪೆಟ್ರೋಲ್ ವ್ಯಸನ

ಮಣ್ಣೆ ರಾಜು
Published 2 ಫೆಬ್ರುವರಿ 2021, 20:03 IST
Last Updated 2 ಫೆಬ್ರುವರಿ 2021, 20:03 IST

‘ಡಾಕ್ಟ್ರೇ, ಬೈಕ್ ದುಶ್ಚಟ ಕಲಿತುಬಿಟ್ಟಿದೆ...!’ ರಿಪೇರಿ ಆಸ್ಪತ್ರೆಗೆ ಬಂದು ಶಂಕ್ರಿ ಬೈಕ್ ನಿಲ್ಲಿಸಿದ.

‘ವಿಪರೀತ ಕುಡಿಯುತ್ತದೆ ಡಾಕ್ಟ್ರೇ, ಕುಡುಕ ಬೈಕಿನಿಂದ ಸಂಸಾರದ ನೆಮ್ಮದಿ ಹಾಳಾಗಿದೆ. ಪೆಟ್ರೋಲ್ ವ್ಯಸನಿ ಬೈಕಿಗೆ ಟ್ರೀಟ್‍ಮೆಂಟ್ ಕೊಡಿ’ ಎನ್ನುತ್ತಾ ಸುಮಿ ಬೈಕ್‌ನಿಂದ ಇಳಿದಳು.

‘ಕುಡುಕ ಬೈಕನ್ನು ಗುಜರಿಗೆ ಹಾಕಿಬಿಡೋಣ ಅನ್ನುವಷ್ಟು ಬೇಜಾರಾಗಿದೆ’ ಅಂದ ಶಂಕ್ರಿ.

ADVERTISEMENT

‘ಆತುರಪಡಬೇಡಿ, ನೀವು ಬೈಕ್ ಓನರ್, ನಾನು ಸ್ಪ್ಯಾನರ್. ಏನು ಕಾಯಿಲೆ ಅಂತ ಚೆಕ್ ಮಾಡಿ ಹೇಳ್ತೀನಿ... ಇದರ ಜಾತಕ ಕೊಡಿ’ ಕೇಳಿದರು ರಿಪೇರಿ ಡಾಕ್ಟರ್.

ಇತ್ತೀಚೆಗೆ ಬೈಕ್ ರಿಪೇರಿ ಮಾಡಿಸಿದ ಬಿಲ್ಲು, ದಾಖಲೆ ಕೊಟ್ಟ ಶಂಕ್ರಿ, ‘ಮೊನ್ನೆ ತಾನೆ ಗೇರು, ಬ್ರೇಕು ರಿಪೇರಿ ಮಾಡಿಸಿ ಸರ್ವೀಸ್ ಮಾಡಿಸಿದ್ದೆ’ ಎಂದ.

‘ಬೈಕನ್ನು ಮನೆ ಮಗನಂತೆ ನೋಡಿಕೊಂಡಿದ್ದೇವೆ. ಆಯುಧ ಪೂಜೆಯಲ್ಲಿ ಮೈ ತೊಳೆದು ತೆಂಗಿನಕಾಯಿ, ಕುಂಬಳಕಾಯಿ ಒಡೆದು ಪೂಜೆ ಮಾಡ್ತೀವಿ, ಕೇಳಿದಾಗಲೆಲ್ಲಾ ಪೆಟ್ರೋಲ್ ಹಾಕಿಸ್ತೀವಿ’ ಅಂದಳು ಸುಮಿ.

ಡಾಕ್ಟರ್ ನಟ್ಟು- ಬೋಲ್ಟು ಬಿಚ್ಚಿ, ಬೈಕಿನ ಅಂಗಾಂಗ ಪರೀಕ್ಷೆ ಮಾಡಿದರು.
‘ಬೈಕ್ ಆರೋಗ್ಯವಾಗಿದೆ, ಕುಡಿತದ ದುಶ್ಚಟವೂ ಇಲ್ಲ. ಅಮಾಯಕ ಬೈಕ್ ಅನ್ನು ಅನ್ಯಾಯವಾಗಿ ಬೈಯಬೇಡಿ...’ ಅಂದ್ರು ಡಾಕ್ಟರ್.

‘ಬೆಳಿಗ್ಗೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರೆ ಸಂಜೆ ವೇಳೆಗೆ ಕುಡಿದು ಖಾಲಿ ಮಾಡುತ್ತದೆ ಡಾಕ್ಟ್ರೇ...’ ಶಂಕ್ರಿ ದೂರು ಹೇಳಿದ.

‘ಬೈಕಿಗೆ ಕಾಯಿಲೆನೂ ಇಲ್ಲ, ಪೆಟ್ರೋಲ್ ಕುಡಿಯುವ ಖಯಾಲಿನೂ ಇಲ್ಲ. ನಿಮಗೆ ಆರ್ಥಿಕ ದೌರ್ಬಲ್ಯ ಇದೆ, ಚಿಕಿತ್ಸೆ ಪಡೆಯಿರಿ. ಇವತ್ತು ಇದ್ದ ಪೆಟ್ರೋಲ್ ರೇಟು ನಾಳೆ ಜಾಸ್ತಿಯಾಗಿರುತ್ತದೆ. ಬೈಕನ್ನು ಬೈಯ್ಯೋದುಬಿಟ್ಟು ಪೆಟ್ರೋಲ್ ಬೆಲೆ ಏರಿಕೆಗೆ ತಕ್ಕಂತೆ ಆರ್ಥಿಕ ಸ್ಥಿತಿಯನ್ನು ಏರಿಸಿಕೊಳ್ಳಿ...’ ಎಂದು ಡಾಕ್ಟರ್ ಬುದ್ಧಿ ಹೇಳಿ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.