ADVERTISEMENT

‘ಡಿಸ್ಕವರಿ’ ಥರಾವರಿ!

ಗುರು ಪಿ.ಎಸ್‌
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
   

ಒಂದು ಕಡೆ ಸಿಂಹಗಳ ಸಾಲು. ಅದರ ಎದುರು ಹುಲಿಗಳು. ಮುಂದೆ ಆನೆಗಳ ಹಿಂಡು, ಅದರ ಹಿಂದೆಯೇ ಜಿಂಕೆಗಳ ಗುಂಪು. ದಶಕಗಳಿಂದ ‘ಡಿಸ್ಕವರಿ’ ಲೋಗೊ ಮಾತ್ರ ನೋಡುತ್ತಿದ್ದ ಅವುಗಳಿಗೆ,ತಮ್ಮ ದೇಶದ ನಾಯಕ, ತಮ್ಮೆದುರೇ ಬಂದಿದ್ದು ಕಂಡು ಎಲ್ಲಿಲ್ಲದ ಖುಷಿ. ನಾ ಮುಂದು, ತಾ ಮುಂದು ಎಂದು ಮಾತಿಗಿಳಿದವು.

‘ಏನ್‌ ಸಾರ್, ನೀವಿಲ್ಲಿ? ಇಂಥ ದಟ್ಟ ಕಾಡಲ್ಲಿ ನಾವಿಲ್ಲಿಯೇ ಇದ್ದೇವೆ ಎಂದು ಹೇಗೆ ಪತ್ತೆ ಹಚ್ಚಿದ್ರಿ?’ ಕೇಳಿತು ಸಿಂಹ.

‘ದೇಶದ ಯಾವುದೇ ರಾಜ್ಯದ ಎಮ್ಮೆಲ್ಲೆ ಮನಸಲ್ಲಿ ಏನಿದೆ, ಯಾರು ಜಂಪಿಂಗ್‌ ಸ್ಟಾರ್‌ ಆಗಬಹುದು ಎಂದು ದೆಹಲಿಯಲ್ಲಿ ಕುಳಿತೇ ಪತ್ತೆ ಹಚ್ಚುವ ನನಗೆ, ಈ ಕಾಡಲ್ಲಿ ನಿಮ್ಮನ್ನು ಹುಡುಕೋದು ಕಷ್ಟವಾ?’ ನಗ್ತಾ ಹೇಳಿದ್ರು ನಾಯಕ.

ADVERTISEMENT

‘ಎಲ್ಲರೂ ಸ್ಪೇಸ್‌ ಬಗ್ಗೆ ಮಾತಾಡ್ತಿರೋ ಈ ಸಂದರ್ಭದಲ್ಲಿ, ನಮ್ಮಂಥ ಸ್ಪೀಷೀಸ್‌ಗಳನ್ನ ನೋಡೋಕೆ ಬಂದಿದ್ದೀರಲ್ಲ, ಗ್ರೇಟ್‌ ಸಾರ್‌ ನೀವು’ ಎಂದು ವಾನರವೊಂದು ಓಲೈಸತೊಡಗಿತು.

‘ನೋಡಿ, ನನಗೆ ನೀವು ಬೇರೆಯಲ್ಲ, ವಿರೋಧ ಪಕ್ಷಗಳು ಬೇರೆಯಲ್ಲ. ನಿಮ್ಮನ್ನು ಯಾವ ರೀತಿ ನೋಡ್ತೀನೋ, ಅವರನ್ನೂ ಹಾಗೇ ಕಾಣ್ತೀನಿ’ ಎಂದುತ್ತರಿಸಿದರು ಕ್ಯಾಪ್ಟನ್‌ ನಮೋ.

ಪ್ರಶ್ನೆಗೂ–ಉತ್ತರಕ್ಕೂ ತಾಳೆಯಾಗದ್ದನ್ನು ಕಂಡು ಗೊಂದಲಕ್ಕೀಡಾಯಿತು ಪ್ರಾಣಿ ಸಂಕುಲ.

‘ಸಿಂಹ, ಆನೆಗಳ ಆರ್ಭಟ, ಗರ್ಜನೆ ಕೇಳಿಯೂ ನೀವು ಶಾಂತರಾಗಿಯೇ ಇದೀರಲ್ಲ. ಯೋಗಾಭ್ಯಾಸ ಮಾಡುತ್ತಿರುವುದರಿಂದಲೇ ಇದು ಸಾಧ್ಯವಾಯಿತೇ ಅಂಕಲ್‌’ ಕೇಳಿತು ಮೊಲ. ‘ಮನದಲ್ಲಿ ಪತ್ರಕರ್ತರನ್ನ ನೆನಪಿಸಿಕೊಂಡೆ. ಅನುಭವ ಕೈ ಹಿಡಿಯಿತು’ ಕಣ್ಣುಮಿಟುಕಿಸಿದರು ಲೀಡರ್.

ಎಲ್ಲ ಪ್ರಾಣಿಗಳ ಜೊತೆ ಸೆಲ್ಫಿ ತೆಗೆದುಕೊಂಡ ನಾಯಕ, ಅದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದರು. ಬೆಂಬಲಿಗನೊಬ್ಬ ಕಮೆಂಟಿಸಿದ. ‘ನೋಡಿ, ನಮ್ಮ ನಾಯಕನ ಸಾಧನೆ. ಅವರು ಕಾಡಿಗೆ ಹೋಗಿ ಬಂದ ನಂತರ ದೇಶದಲ್ಲಿ ಹುಲಿಗಳ ಸಂಖ್ಯೆಯೇ ಹೆಚ್ಚಾಗಿದೆ’!

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.