ಲಿಂಗರಾಜು ಡಿ.ಎಸ್.
‘ಮಾಜಿ ಶಾಸಕರಿಗೆಲ್ಲಾ ಸರ್ಕಾರ ಲಕ್ಷಗಟ್ಟಲೆ ಸಂಬಳ, ಪಿಂಚಣಿ, ಲವಾಜಮೆ ಖರ್ಚು ಕೊಟ್ಟು ಸಾಕಿಕ್ಯಂಡದಂತೆ’ ತುರೇಮಣೆಗೆ ಹೇಳಿದೆ.
‘ಶಾಸಕರು ಏನೂ ಮಾಡದೇ ಇದ್ದದ್ದಕ್ಕೆ ಪಿಂಚಣಿ ತಲಾ ಎಪ್ಪತ್ತೈದು ಸಾವಿರ. ಕಾಲೇಜಲ್ಲಿ ವತ್ತಾರಿಂದ ಸಂಜೆಗಂಟಾ ದುಡಿಯೋ ಡಬ್ಬಲ್ ಡಿಗ್ರಿ ಲೆಕ್ಚರರಿಗೆ ಬರೀ ಇಪ್ಪತ್ತು ಸಾವಿರವಂತೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು
ವರ್ಸದಿಂದ ಸಂಬಳ ಜಾಸ್ತಿ ಮಾಡಿ ಅಂತ ಗಂಟಲು ಹರಕತ್ತಾವರೆ. ಸರ್ಕಾರ ಕ್ಯಾರೆ ಅಂದುಲ್ಲ. ಶಾಸಕರ ಕಾಯಿಲೆ ಕಸಾಲೆಗೆ ತಿಂಗಳಾ ಇಪ್ಪತ್ತು ಸಾವಿರ ಕೊಟ್ಟಾರಂತೆ. ನಮ್ಮ ಆರೋಗ್ಯ ಕೆಟ್ಟರೆ ಕೇಳೋರು ಗತಿ ಇಲ್ಲ’ ತುರೇಮಣೆ ಸಿಟ್ಟುಗಂದರು.
‘ನಿಗಮ, ಮಂಡಲಿಗಳ ಕಾಸುನೂ ಬುಡದಂಗೆ ಗೋರಿಕಂದು ತಿಂದವ್ರೆ’ ಅಂತಂದೆ.
‘ಇಷ್ಟೇ ಅಲ್ಲ ಕಂಡ್ಲಾ, ಹಾಲಿ–ಮಾಜಿಗಳು ವಿಮಾನ ದಾಗೋಗಕ್ಕೆ ತಿಂಗಳಿಗೆ ಎರಡು ಲಕ್ಸ ಕಾಸು. ಪಿಎಗೆ, ರೂಂಬಾಯಿಗೆ ಇಪ್ಪತ್ತೈದು ಸಾವಿರ. ಐದೈದು ವರ್ಸಕ್ಕೂ ತಪ್ಪದೇ ಸಂಬಳ ಜಾಸ್ತಿ ಮಾಡಿಕ್ಯತ್ತರೆ. ದೇಸ ಹ್ಯಂಗೆ ಉದ್ಧಾರಾತದೆ?’ ಅಂತು ಯಂಟಪ್ಪಣ್ಣ.
‘ಭೇಸ್ ಮಗನೇ. ಒಪ್ಪಿದೆ’ ಅಂತ ಮೂರು ಜನ ದೊಡ್ಡ ಮನುಸ್ರ ಥರಾ ಟೋಪಿ, ಪೇಟ ಇಕ್ಕ್ಯಂದೋರು ಕಾಣಿಸಿಗ್ಯಂದು ಅವರೇ ಪರಿಚಯ ಮಾಡಿಕ್ಯಂದರು.
‘ನೋಡ್ಲಾ ನಾನು ಕೆಂಗಲ್ ಹನುಮಂತಯ್ಯ, ಇವರು ಕೆ.ಸಿ. ರೆಡ್ಡಿ, ಇವರು ಕಡಿದಾಳ್ ಮಂಜಪ್ಪ. ಪ್ರಾಮಾಣಿಕತೆ ಇಲ್ಲದ ಈ ಕಾಲದ ರಾಜಕಾರಣಿಗಳಿಂದ ಯಾವತ್ತೂ ದೇಸ ಉದ್ಧಾರಾಗಕುಲ್ಲ ಕನ್ರೋ. ದಿಟವಾದ ರಾಜಕಾರಣಿಗಳೆಲ್ಲಾ ನಮ್ಮ ಜೊತೆ ಅವ್ರೆ’ ಕೆಂಗಲ್ ನೊಂದ್ಕಂದ್ರು.
‘ದಿಟ ಕನ್ರೀ ಕೆಂಗಲ್. ನ್ಯಾಯ–ನೀತಿಗೋಸ್ಕರ ಸಿಎಂ ಪೋಸ್ಟುನ್ನೇ ಕಿತ್ತು ಉರುಬಿ ಬಂದೋರು ನಾವು. ಜನಕ್ಕೆ ಏನಾದರೂ ಒಳ್ಳೇದು ಮಾಡಬಕು ಅನ್ನೋ ಘನವಾದ ಇಚಾರವೇ ಈಗಿನೋರಿಗಿಲ್ಲ. ಇವರ ಅಡಾವುಡೀಲಿ ನಿಮ್ಮ ಭವಿಷ್ಯ ಮಂಕಾಯ್ತಾ ಅದಲ್ರೋ’ ಅಂದ್ರು ಕಡಿದಾಳ್ ಮಂಜಪ್ಪ.
ನಾವೂ ಸತ್ಯ ಒಪ್ಪಿಕ್ಯಂದು ಸುಮ್ಮಗಾದೊ. ಮೂವರೂ ಮಟಾಮಾಯ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.