ADVERTISEMENT

ಚುರುಮುರಿ: ಬಂಡೆ ಭವಿಷ್ಯ!

ಬಿ.ಎನ್.ಮಲ್ಲೇಶ್
Published 16 ಅಕ್ಟೋಬರ್ 2025, 23:14 IST
Last Updated 16 ಅಕ್ಟೋಬರ್ 2025, 23:14 IST
   

ಬಂಡೆ ಸಾಹೇಬ್ರ ಮನೆ ಮುಂದೆ ಬುಡುಬುಡಿಕೆಯವ ಪ್ರತ್ಯಕ್ಷನಾದ. ‘ಟರ‍್ರ್ ಟಕಟಕ... ಲಕ್ಷ್ಮೀ ಇಚಾರ, ಧನಲಕ್ಷ್ಮೀ ಇಚಾರ... ಕುರ್ಚೀ ಇಚಾರ, ಸಿ.ಎಂ ಕುರ್ಚೀ ಇಚಾರ, ಟರ‍್ರ್ ಟಕಟಕ...’

ಯಾರೊಂದಿಗೋ ಮಾತಾಡುತ್ತಿದ್ದ ಬಂಡೆ ಸಾಹೇಬರು, ‘ಲೇಯ್ ಯಾರೋ ಅದು ಸಿ.ಎಂ ಕುರ್ಚಿ ವಿಷ್ಯ ಮಾತಾಡೋನು? ನೋಟಿಸ್ ಕೊಡ್ತೀನಿ ಅಷ್ಟೆ’ ಎಂದರು.

‘ಸ್ಸಾಮಿ ನಾನು ಬುಡುಬುಡಿಕೆಯೋನು, ದೇವಿ ನನ್ನ ನಾಲಿಗೆ ಮೇಲೆ ನುಡೀತಾ ಐತೆ, ಸಿಟ್ಟಾಗಬ್ಯಾಡ, ಯಾವುದೋ ನೋವು ನಿನ್ನ ಕಾಡ್ತಾ ಐತೆ, ಗಂಟಲ ಮಾತು ಗಂಟಲಲ್ಲೇ ಒದ್ದಾಡ್ತಾ ಐತೆ. ನಿಜಾಂದ್ರೆ ನಿಜಾನ್ನು, ಸುಳ್ಳಂದ್ರೆ ಸುಳ್ಳನ್ನು...’

ADVERTISEMENT

‘ನಿಜ, ಏನೀಗ?’

‘ಸ್ಸಾಮಿ ನೀನು ಒಂದು ರಾಜ್ಯ ಕಟ್ಟಬೇಕು, ಒಂದು ದೇಶ ಕಟ್ಟಬೇಕು ಅಂತ ಆಸೆ ಇಟ್ಕಂಡಿದ್ದೆ... ಸ್ಸಾಮಿ ನಿಮ್ಮವರೇ ನಿನ್ನ ದಾರಿಗೆ ಮುಳ್ಳಾಗವರೆ, ಹೌದೋ ಇಲ್ಲವೋ...’

‘ಗೊತ್ತಿಲ್ಲ...’

‘ಸ್ಸಾಮಿ ಹಿಂದೆ ನಿನ್ನ ಹಣೆಬರ, ಹಣೆಬರ ಅಂದ್ರೆ ಟೇಮು ಚೆನ್ನಾಗಿತ್ತು. ಗೆದ್ದು ಗದ್ದುಗೆ ಹಿಡಿಯೋ ಕಾಲ ಬಂದಿತ್ತು. ಈಗ ಒದ್ದು ಕಿತ್ಕಳೋ ಹಾಗೆ ಆಗೋಯ್ತು... ನಿಜವೋ?’

‘ಸರಿ, ಮುಂದಕ್ಕೇಳು...’

‘ಸ್ಸಾಮಿ, ನೀನುಂಟು ನಿನ್ನ ದೇವರುಂಟು... ಪೂಜೆ, ಹೋಮ ಏನೆಲ್ಲ ಒಂಟಿ ಕಾಲಲ್ಲಿ ನಿಂತು ಪ್ರಾರ್ಥನೆ ಮಾಡಿದ್ದೇ ಆಯ್ತು. ದೇವಿ ಹೂ ಕೊಟ್ರೂ ಪೂಜಾರಿ ಕೊಡ್ತಾನೋ ಇಲ್ವೋ ಅನ್ನೋ ಅನುಮಾನ... ನಿಜವೋ?’

‘ಹೂ ಕಣಯ್ಯ, ಮುಂದೆ?’

‘ಸ್ಸಾಮಿ ಮಂಗಳವಾರ ಮುಖ ಚೌರ ಮಾಡಬೇಡ, ಬುಧವಾರ ಹೊಸ ಬಟ್ಟೆ ಹಾಕಬೇಡ, ಮಾಸ ಹನ್ನೊಂದು ಕಳೆದು ಹನ್ನೆರಡರ ಒಳಗೆ ನೀನು ಸಿಂಹಾಸನ ಏರೋ ಅಂಥ ಒಂದು ಗಟ್ಟಿ ತಾಯತ ಮಾಡಿಕೊಡ್ತೀನಿ, ನಂಗೆ ನಿಂದೊಂದು ಹಳೇ ಶರ್ಟ್ ಕೊಡ್ತೀಯ?’

‘ಹಳೆ ಶರ್ಟ್ ಯಾಕೆ, ಬುಡುಬುಡಿಕೆ ನಿಗಮ ಅಂತ ಮಾಡಿ ನಿನ್ನೇ ಅಧ್ಯಕ್ಷ ಮಾಡ್ತೀನಿ, ಅದೇನು ಮಾಡಿಕೊಡು...’

ಬುಡುಬುಡಿಕೆಯವನಿಗೆ ಮಾತೇ ಹೊರಡಲಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.