ADVERTISEMENT

ಚುರುಮುರಿ: ಕ್ಯಾಮೆರಾ ಕ್ರಷ್!

ಗುರು ಪಿ.ಎಸ್‌
Published 26 ಜುಲೈ 2022, 19:31 IST
Last Updated 26 ಜುಲೈ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಯಾಕ್ ಮುದ್ದಣ್ಣ, ಮುಖ ಜಿಎಸ್‌ಟಿ ಹಾಕಿರೊ ಮೊಸರಂಗಾಗಿದೆ. ಏನ್ ಸಮಾಚಾರ’ ಕಾಲೆಳೆದ ವಿಜಿ.

‘ಇನ್ನೇನಿರುತ್ತೆ, ಫೈನಾನ್ಷಿಯಲ್ ಪ್ರಾಬ್ಲಮ್ಮು...‌’

‘ಏನೂ! ಸರ್ಕಾರಿ ನೌಕರಿ ಇರೋ ನಿನಗೆ ಆರ್ಥಿಕ ಸಂಕಷ್ಟವೇ...’

ADVERTISEMENT

‘ಗವರ್ನ್‌ಮೆಂಟ್ ಜಾಬ್‌ನಲ್ಲಿರೋರ ಕಷ್ಟ ನಿಂಗೇನ್ ಗೊತ್ತು, ಸುಮ್ನಿರಪ್ಪ’ ಸಿಟ್ಟಲ್ಲೇ ಹೇಳ್ದ ಮುದ್ದಣ್ಣ.

‘ಸಂಬಳದ‌ ಜೊತೆ ಗಿಂಬಳವೂ ಬರ್ತಿರುತ್ತೆ, ಅಂಥದ್ದರಲ್ಲಿ ಏನಪ್ಪ ಕಷ್ಟ ನಿನಗೆ...’

‘10 ವರ್ಷದವರೆಗೂ ನನ್ನ ಸ್ಯಾಲರೀಲಿ 40 ಪರ್ಸೆಂಟ್ ಕಮಿಷನ್ ಕೊಡ್ತೀನಿ ಅಂತಾ ಕಮಿಟ್ ಆಗಿ ಈ ಕೆಲಸ ಗಿಟ್ಟಿಸಿಕೊಂಡಿದೀನಿ... ಈಗ ಅದಕ್ಕೆ ತಕ್ಕಂಗೆ ಗಿಂಬಳದ ಟಾರ್ಗೆಟ್ ರೀಚ್ ಮಾಡೋಕಾಗ್ತಿಲ್ಲ’.

‘ಯಾಕೆ, ಯಾರೂ ಲಂಚ ಕೊಡ್ತಿಲ್ವ...’

‘ಇಲ್ಲ ಮಾರಾಯ. ಈಗ ಕ್ಯಾಮೆರಾ ಕೈಯಲ್ಲಿ ಹಿಡ್ಕೊಂಡೇ ಬಂದಿರ್ತಾರೆ. ಮೊದಲಾದರೆ, ಸರ್ಕಾರಿ ಆಫೀಸ್‌ನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ ಅಂತಾ ಓಡಿಸ್ತಿದ್ವಿ, ಆದ್ರೆ, ಸರ್ಕಾರ ಆರ್ಡರ್ ಮಾಡಿ, ಕ್ಯಾನ್ಸಲ್ ಮಾಡಿದ ಮೇಲಂತೂ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂಗಾಗಿದೆ. ಪೆನ್ ಕ್ಯಾಮೆರಾ, ಮೊಬೈಲ್ ಕ್ಯಾಮೆರಾ, ದೊಡ್ಡ ಕ್ಯಾಮೆರಾ, ಚಿಕ್ಕ ಕ್ಯಾಮೆರಾ ಎಲ್ಲ ತಂದು ಮುಖದ ಮೇಲೆ ಹಿಡಿದು, ಏನೇನೋ ಕೇಳ್ತಾರೆ...’

‘ಮುಂದೇನು ಮಾಡಬೇಕಂತಿದೀಯ...’

‘ಕ್ಯಾಮೆರಾ ಶಕ್ತಿ ನೋಡಿ, ಅದರ ಮೇಲೆಯೇ ಕ್ರಷ್ ಆಗಿದೆ. ಈ ಕೆಲಸಕ್ಕೆ ರಾಜೀನಾಮೆ ಬಿಸಾಕಿ, ನಾನೇ ಕ್ಯಾಮೆರಾಮನ್ ಆಗಬೇಕಂತ ಮಾಡಿದೀನಿ...’

‘ನಿನಗೇನ್ ಹುಚ್ಚಾ... ಕ್ಯಾಮೆರಾಮನ್ ಆದ್ರೆ ಏನ್ ಸಿಗುತ್ತೆ...’

‘ಸದ್ಯ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಶಕ್ತಿ ಇರುವಂತಹ ಏಕೈಕ ವಸ್ತು- ವ್ಯಕ್ತಿ ಅಂದ್ರೆ ಕ್ಯಾಮೆರಾ ಮತ್ತು ಕ್ಯಾಮೆರಾಮನ್.‌ ದೊಡ್ಡೋರ ಜೊತೆ ಯಾವಾಗಲೂ ಓಡಾಡೋದ್ರಿಂದ ಝಡ್ ಪ್ಲಸ್ ಸೆಕ್ಯುರಿಟಿಯೂ ಸಿಗುತ್ತೆ. ಸೋ, ಐ ಲವ್ ಕ್ಯಾಮೆರಾ’ ಕಣ್ಣು ಮಿಟುಕಿಸಿದ ಮುದ್ದಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.