ADVERTISEMENT

ಚುರುಮುರಿ: ಮುಖ ಮತ್ತು ಮುಖವಾಡ

ಬಿ.ಎನ್.ಮಲ್ಲೇಶ್
Published 22 ಆಗಸ್ಟ್ 2025, 0:01 IST
Last Updated 22 ಆಗಸ್ಟ್ 2025, 0:01 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಲೇ ತೆಪರ, ಮೊನ್ನಿ ನಿಮ್ ಟೀವ್ಯಾಗೆ, ನಮ್ಮಲ್ಲೇ ಮೊದಲು ಅಂತ ತೋರಿಸ್ತಿದ್ರೆಲ್ಲ, ಆ ಮಾಸ್ಕ್ ಮ್ಯಾನ್ ತಪ್ಪು ಒಪ್ಕಂಡ ಅಂತ ಇಡೀ ದಿನ ಪುಂಗಿದ್ರೆಪ, ಬರೀ ಸುಳ್ಳು...’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.

‘ಅಯ್ಯೋ, ಈ ತೆಪರನ ಕತಿ ನಿಂಗೊತ್ತಿಲ್ಲ. ಅಲ್ಲಿ 15 ವರ್ಷದ ಹಿಂದೆ ಬಾಲಕಿ ಶವ ಹೂತು ಹಾಕಿದ್ರಂತೆ. ಈಗ ಗುಂಡಿ ಅಗೆದ್ರೆ ಹೆಂಗಸಿನ ಶವ ಸಿಕ್ತಂತೆ. ಅದೆಂಗೆ ಅಂದ್ರೆ, 15 ವರ್ಷದಲ್ಲಿ ಬಾಲಕಿ ದೊಡ್ಡೋಳಾಗಿರಲ್ವ ಅಂತಾನೆ?’ ಗುಡ್ಡೆ ಜೋರಾಗಿ ನಕ್ಕ.

ADVERTISEMENT

‘ಗುಡ್ಡೆ ಬ್ಯಾಡ ನೋಡು...’ ತೆಪರೇಸಿಗೆ ಸಿಟ್ಟು ಬಂತು.

‘ಶಾಂತಿ ಶಾಂತಿ, ಮೊದ್ಲೇ ಮುಸುಕಿನ ಗುದ್ದಾಟ ನಡೆಸಿರೋ ಸಿಎಂ, ಡಿಸಿಎಂ ಕೈಗೆ ಮೊನ್ನೆ ಅದ್ಯಾರೋ
ಗದೆ ಕೊಟ್ಟಂಗೆ ಆಗಬಾರ್ದು. ಆದ್ರೂ ಟೀವಿ ತುಂಬಾ ಅದೇನ್ ತೋರಿಸ್ತೀರಪ, ತೆಲಿ ಚಿಟ್ಟಿಡೀತತಿ...’ ಎಂದಳು
ಮಂಜಮ್ಮ.

‘ಆ ಮಾಸ್ಕ್ ಮ್ಯಾನ್‌ಗೆ ಎಷ್ಟು ಪ್ರಚಾರ ಸಿಕ್ಕೇತಿ ಅಂದ್ರೆ, ನಾಳೇನೆ ಎಲೆಕ್ಷನ್‌ಗೆ ನಿಂತ್ರೂ ಗೆದ್ದುಬಿಡ್ತಾನೆ ನೋಡು’ ಎಂದ ಕೊಟ್ರ.

‘ಲೇ ತಮಾ... ಅವ್ನು ಎಲ್ರಿಗೂ ಕಾಣಂಗೆ ಮುಖವಾಡ ಹಾಕ್ಕಂಡಿದಾನೆ. ನಮ್ ರಾಜಕಾರಣಿಗಳದ್ದು ಮುಖ ಯಾವುದು, ಮುಖವಾಡ ಯಾವುದು ಗೊತ್ತೇ ಆಗಲ್ಲ...’ ದುಬ್ಬೀರ ನಕ್ಕ.

‘ಈ ತೆಪರ ಅವನ ಟೀವೀಲಿ ಅಂಥೋರ ಮುಖವಾಡ ಕಳಚಲೆ ಅಂದ್ರೆ ಬರೀ ಬುರುಡೆ ಬಿಡ್ತಾನೆ. ಬಿಗ್ ಟ್ವಿಸ್ಟ್ ಅಂತೆ, ಮಹಾ ಎಕ್ಸ್‌ಕ್ಲೂಸಿವ್ ಅಂತೆ... ಮಣ್ಣಾಂಗಟ್ಟಿ...’ ಗುಡ್ಡೆಗೂ ಸಿಟ್ಟು ಬಂತು.

‘ಲೇ ಗುಡ್ಡೆ, ಜಾಸ್ತಿ ಮಾತಾಡಿದ್ರೆ ಗುಂಡಿ ಅಗೆಯೋವಾಗ ನಿಂದೇ ತೆಲಿ ಬುರುಡೆ ಸಿಕ್ತು ಅಂತ ಬ್ರೇಕಿಂಗ್ ನ್ಯೂಸ್ ಕೊಟ್ ಬಿಡ್ತೀನಿ ನೋಡು...’ ತೆಪರೇಸಿ ಎಚ್ಚರಿಸಿದ.

‘ಅದನ್ನ ಯಾರೂ ನಂಬಲ್ಲ ಬಿಡು’ ಎಂದಳು ಮಂಜಮ್ಮ.

‘ನಂಬಲ್ವಾ? ಯಾಕೆ?’

‘ಯಾಕಂದ್ರೆ ಗುಡ್ಡೆಗೆ ತೆಲಿನೇ ಇಲ್ಲ, ಇನ್ನು ಬುರುಡೆ ಹೆಂಗೆ ಸಿಕ್ತತಿ?’ ಮಂಜಮ್ಮನ ಜೋಕಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.