‘ನೀತಿನಿಯಮಗಳನ್ನು ಪರಿಷ್ಕರಣೆ ಮಾಡಿದ್ದೇವೆ. ನಮ್ಮ ಪಕ್ಷದ ಶಿಸ್ತು ಸಮಿತಿಯ ಸೂಚನೆಯಂತೆ ಸುದ್ದಿಗೋಷ್ಠಿಗಳು ನಡೆಯಲಿವೆ...’ ಎಂದು ರಾಜಕೀಯ ಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪತ್ರಕರ್ತೆಯರನ್ನು ಯಾವ ಸಂದರ್ಭದಲ್ಲಿ ಹೊರಗಿಟ್ಟು ಪ್ರೆಸ್‌ಮೀಟ್ ಮಾಡ್ತೀರಿ ಸಾರ್?’ ವರದಿಗಾರ್ತಿಯ ಪ್ರಶ್ನೆ.
‘ಯಾವಾಗ, ಯಾವ್ಯಾವ ವರದಿಗಾರರನ್ನು ಹೊರಗಿಡಬೇಕು ಎಂಬುದನ್ನು ನಮ್ಮ ಶಿಸ್ತು ಸಮಿತಿ ನಿರ್ಧರಿಸುತ್ತದೆ. ನಮ್ಮ ನಿಲುವಿಗೆ ಬದ್ಧವಾಗಿರುವ, ಅರ್ಹ, ಆಯ್ದ ಪತ್ರಕರ್ತರನ್ನು ಮಾತ್ರವೇ ಗೋಷ್ಠಿಗೆ ಆಹ್ವಾನಿಸಿ, ಉಳಿದವರನ್ನು ದೂರವಿಡುವ ಬಗ್ಗೆಯೂ ಚಿಂತನೆ ನಡೆದಿದೆ’.
‘ಇದು ಪತ್ರಕರ್ತರಿಗೆ ನೀಡುವ ಎಚ್ಚರಿಕೆಯೆ ಸಾರ್?’ ಪತ್ರಕರ್ತರೊಬ್ಬರ ಪ್ರಶ್ನೆ.
‘ಅಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂಬ ಮುನ್ನೆಚ್ಚರಿಕೆ’ ನಾಯಕರು ನಕ್ಕರು.
‘ಪತ್ರಿಕಾಗೋಷ್ಠಿಗೆ ನೀವೇ ಕೊಶ್ಚನ್ ಪೇಪರ್ ಕೊಡ್ತೀರಾ?’ ಇನ್ನೊಬ್ಬ ಪತ್ರಕರ್ತನ ಪ್ರಶ್ನೆ.
‘ಹೌದು. ನಾವು ಕೊಡುವ ಕೊಶ್ಚನ್ ಪೇಪರ್‌ನಲ್ಲಿರುವ ಪ್ರಶ್ನೆಗಳನ್ನು ಹಾಗೂ ಅದಕ್ಕೆ ಪೂರಕವಾದ ಉಪಪ್ರಶ್ನೆಗಳನ್ನು ಮಾತ್ರ ನೀವು ಕೇಳಬೇಕು. ಅದರ ಹೊರತಾಗಿ ಉದ್ಧಟತನದ ಪ್ರಶ್ನೆ ಕೇಳಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ’.
‘ಪತ್ರಿಕಾಗೋಷ್ಠಿಯ ನಿಯಮಗಳ ಪರಿಷ್ಕರಣೆಗೆ ಕಾರಣವೇನು ಸಾರ್?’
‘ಖಡ್ಗಕ್ಕಿಂಥಾ ಲೇಖನಿ ಹರಿತ, ಲೇಖನಿಗಿಂಥಾ ನೀವು ಕೇಳುವ ಪ್ರಶ್ನೆಗಳು ಹರಿತ ಎಂಬುದು ನಮ್ಮ ಅನುಭವಕ್ಕೆ ಬಂದಿದೆ’.
‘ನಮ್ಮ ಪ್ರಶ್ನೆಗಳು ನಿಮಗೆ ಮಾರಕವಾಗುತ್ತವೆಯೆ ಸಾರ್?!’
‘ಹೌದು. ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ನೀವು ಕೇಳಿದ ಅಪಾಯಕಾರಿ ಪ್ರಶ್ನೆಗಳಿಂದ ನಮ್ಮ ನಾಯಕರು ಆಘಾತಗೊಂಡು ಆಸ್ಪತ್ರೆ ಸೇರಿದ್ದಾರೆ. ಆ ಗೋಷ್ಠಿಯ ನಿಮ್ಮ ವರದಿಯೂ ಪಕ್ಷದ ಘನತೆಗೆ ಧಕ್ಕೆ ತಂದಿದೆ... ಸುದ್ದಿಗೋಷ್ಠಿಗಳನ್ನು ‘ಶುದ್ಧಿಗೋಷ್ಠಿ’ ಮಾಡಬೇಕಾಗಿದೆ. ಉದ್ಧಟತನದ ಪ್ರಶ್ನೆ ಕೇಳುವ ಪತ್ರಕರ್ತರನ್ನು ನಮ್ಮ ಭದ್ರತಾ ಸಿಬ್ಬಂದಿಯವರು ಎತ್ತಿ ಹೊರಗೆ ಹಾಕುತ್ತಾರೆ...’ ಎಂದ ನಾಯಕರು ಪತ್ರಿಕಾಗೋಷ್ಠಿ ಮುಗಿಸಿ ಎದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.