
‘ಶಿವನೆ ನಿನ್ನಾಟ ಬಲವರ್ಯಾರ್ಯಾರೋ, ಹರನೆ ನಿನ್ನಾಟ ಬಲ್ಲವರ್ಯಾರ್ಯಾರೋ... ಶಿವ! ಶಿವ, ಶಿವ, ಶಿವ...’ ಹಾಡುತ್ತಾ ಮನೆಯೊಳಗೆ ಹೋದೆ.
‘ಶಿವರಾತ್ರಿ ಮುಗಿದ ಮೇಲೂ ಶಿವನ ಸ್ಮರಣೆ ಮಾಡ್ತಿದೀರಿ, ಏನ್ ಸಮಾಚಾರ’ ಕೇಳಿದಳು ಹೆಂಡತಿ.
‘ನಾನು ಹಾಡ್ತಿರೋದು ಸಂಕಷ್ಟಹರ ಶಿವನ ಬಗ್ಗೆ ಅಲ್ಲ, ಸಂಕಷ್ಟದಲ್ಲಿರುವ ಶಿವನ ಬಗ್ಗೆ...’
‘ನೀವು ನೋಡಿದ್ರೆ ಹಾಡು ಹಾಡ್ತಾ ಎಂಜಾಯ್ ಮಾಡ್ತಿದೀರಿ... ನ್ಯೂಸ್ ಪೇಪರ್ ನೋಡಿದ್ರೆ ಬರೀ ನಾಯಿ, ನಾಯಿ ಬಾಲ, ಬೀದಿ ನಾಯಿ, ನಿಯತ್ತಿನ ನಾಯಿ ಅನ್ನೋ ಸುದ್ದಿಗಳೇ ಕಾಣ್ತಿವೆಯಲ್ಲ...’ ಪೇಪರ್ ಓದುತ್ತಾ ಕೇಳಿದಳು.
‘ಹೌದು, ನಾನೂ ನೋಡಿದೆ. ನಾಯಿ ತನ್ನ ಬಾಲಾನ
ಅಲ್ಲಾಡಿಸಬೇಕು, ಬಾಲವೇ ನಾಯಿಯನ್ನ ಅಲ್ಲಾಡಿಸ
ಬಾರದು ಅನ್ನೋ ಸ್ಟೇಟ್ಮೆಂಟ್ ಓದಿದೆ. ಇಲ್ಲಿ ಯಾರು ಬಾಲ, ಯಾರು ನಾಯಿ?’
‘ಇನ್ಯಾರು, ಹೈಕಮಾಂಡ್ ನಾಯಿ, ಶಾಸಕರು ಬಾಲ ಅಂತ ಅರ್ಥ’.
‘ಓಹ್, ಹಾಗಾದರೆ ಎಲ್ಲರೂ ಸೇರಿ ಹೈಕಮಾಂಡ್ ಅನ್ನೇ ನಾಯಿ ಅಂದಂಗಾಯ್ತು’ ನಕ್ಕೆ.
‘ಅದು ಹಾಗಿರಲಿ. ನಾಯಿ ಅಂದಾಗೆಲ್ಲ, ನಿಯತ್ತು ಅನ್ನೋ ಪದವನ್ನೂ ರಾಜಕಾರಣಿಗಳು ಬಳಸ್ತಿದ್ದಾರೆ. ಅದೇ ನನಗೆ ಆಶ್ಚರ್ಯ. ಇನ್ನು, ಇರೋ ನಾಯಿಗಳಲ್ಲೇ ನಮ್ ಬೀದಿ ನಾಯಿಗಳ್ಯಾವು, ಪಕ್ಕದ ಬೀದಿ ನಾಯಿಗಳ್ಯಾವು ಅನ್ನೋ ಚರ್ಚೆಯೂ ಶುರುವಾಗಿದೆ’ ಎಂದಳು.
‘ಈ ವೆಬ್‌ಸೈಟ್‌ನಲ್ಲಿ ಮತ್ತೊಂದು ಸುದ್ದಿ ಇದೆ ನೋಡು, ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ಕೊಡ್ತಾರಂತೆ…’
‘ಏಯ್, ಮಾರಾಯ್ರೇ! ಅದು ಹಳೆಯ ಸುದ್ದಿ. ಬೇರೆ ಬೇರೆ ಎರಡು ಸುದ್ದಿ ಒಟ್ಟೊಟ್ಟಿಗೆ ಓದಿ ನನಗೆ ಕನ್‌ಫ್ಯೂಸ್ ಮಾಡಬೇಡ್ರೀ...’ ಎನ್ನುತ್ತಾ, ‘ಈ ಸುದ್ದಿ ಇಂಪಾರ್ಟೆಂಟ್ ಇದೆ ನೋಡಿ. ಆಡಳಿತ ಪಕ್ಷದ ಕೆಲವು ಶಾಸಕರೆಲ್ಲ ಆಸ್ಟ್ರೇಲಿಯಾ ಟೂರ್‌ಗೆ ಹೋಗ್ತಿದಾರಂತೆ. ಯಾಕ್ ಇರಬಹುದು ರೀ...’
‘ಹಾಂ... ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗೆ ಬಿತ್ತಲ್ಲ. ಆ ಹೀನಾಯ ಪ್ರದರ್ಶನಕ್ಕೆ ಕಾರಣ ಏನು ಅಂತ ಕೇಳೋಕೆ ಹೋಗ್ತಿದಾರಂತೆ’ ಎಂದೆ ವ್ಯಂಗ್ಯವಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.