ADVERTISEMENT

ಚುರುಮುರಿ: ಷಟರ್ ರಾಜಕೀಯ!

ತುರುವೇಕೆರೆ ಪ್ರಸಾದ್
Published 26 ಜನವರಿ 2024, 21:41 IST
Last Updated 26 ಜನವರಿ 2024, 21:41 IST
.
.   

‘ರಾಜಕೀಯದವರ ರಿವರ್ಸ್ ಕವಾಯತು ಶುರುವಾಗದೆ ಕಣ್ಲಾ! ಅಲ್ಲಿ ಇಲ್ಲಿ ವಲಸೆ ಓದೋರೆಲ್ಲಾ ತಮ್ ತಮ್ ಪಕ್ಷಕ್ಕೆ ವಾಪಸ್ ಬರೋ ಅಂಗೆ ಕಾಣ್ತದೆ’ ಎಂದ ಗುದ್ಲಿಂಗ.

‘ಓಹೋ! ಕೈ ಷಟರ್ ಎಳೆದು ವಾಪಸ್ ಕಮಲದ ಶೆಲ್ಟರ್‌ಗೆ ಬಂದೋರ್ ಬಗ್ಗೆ ಯೋಳ್ತಿದೀಯಾ ನೀನು?’ ಕೇಳಿದ ಮಾಲಿಂಗ.

‘ಊ್ಞಂ ಕಣ್ಲಾ. ಈಗೀಗ ಪಕ್ಷಾಂತರಕ್ಕೂ ಬೆಲೆ ಇಲ್ದಂಗ್ ಆಗೋಗದೆ. ಒಂದು ಪಾಲ್ಟಿ ಬುಟ್ ಓದ್ಮೇಲೆ ಒಂದೆಲ್ಡು ಮೂರು ವರ್ಷವಾದ್ರೂ ಇರಂಗೇ ಇಲ್ಲ, ಪುಸಕ್ಕಂತ ವಾಟ ಕೀಳ್ತಾರೆ’.

ADVERTISEMENT

‘ಯಾವ್ದಾರಾ ಒಂದು ರೀತಿ ಕಮಾಯಿ ಇಲ್ಲ ಅಂದ್ರೆ, ಥೂ ಅಂತ ಉಗಿದು ವಾಪಸ್ ಬತ್ತಾರೆ. ಇದು ಕವಾಯತು ಅಲ್ಲ ಕಮಾಯಿ ಥೂ!’ ಎಂದ ಕಲ್ಲೇಶಿ.

‘ಇಂಗ್ ಓದ ಪುಟ್ಟ ಬಂದ ಪುಟ್ಟ ಅಂತ ಆದ್ರೆ ಏನ್ಲಾ ಪ್ರಯೋಜನ ಐತೆ?! ತೆನೆ ಅಧ್ಯಕ್ಷರಾಗಿದ್ದ ಕೂಲಿಂಗ್ ಗ್ಲಾಸ್ ಸಾಹೇಬ್ರು ನೋಡು, 6-7 ಸಾರಿ ಪಕ್ಷಾಂತರ ಮಾಡಿ ಪಟ್ಟ, ಪೀಠ ಎಲ್ಲದರ ರುಚಿ ನೋಡುದ್ರು’.

‘ಊ್ಞಂ ಕಣ್ಲಾ, ನಮ್ ಕೇರಿಹಕ್ಕಿನೂ ಎಲ್ಲಾ ಪಕ್ಷದಲ್ಲೂ ರೆಕ್ಕೆ ಬಿಚ್ಚಿ ಹೊರಳಿ, ಗುಂಜು ಅಂಟಿಸ್ಕೊಂಡು ಬಂದಿತ್ತು. ಅಂಗೇ ಕೈ-ತೆನೆ ಹೈಬ್ರಿಡ್ ಹಕ್ಕಿ ಪುಕ್ಕನೂ ತರ್ದು ಆಕಿತ್ತು’.

‘ಸ್ಥಾನ ಮಾನ ಎಲ್ಲಾ ಕೊಟ್ಟಿದ್ರೂ ಇವರು ಇಂಗ್ ಓಗಿ ಅಂಗ್ ವಾಪಸ್ ಬಂದವ್ರಲ್ಲ’.

‘ಹೋದ ಕಡೆ ಅರಳಬೇಕು, ಏನಾದ್ರೂ ಮೆತ್ಕಳೋ ಹಾಗೆ ಹೊರಳಬೇಕು, ಇಲ್ಲ ವಾಪಸ್ ಮರಳಬೇಕು. ಎಲ್ಲಾ ಕೊಟ್ಟವ್ರೆ ಅಂದ್ರೆ ಪುಗಸಟ್ಟೆನಾ? ಶಾಸಕರ ಆಪರೇಶನ್ ಮಾಡಕ್ ಬರ್ಬೇಕು, ಇಲ್ಲ ಸಂಸದರ ಸೀಟಿಗೆ ಪ್ರಿಪರೇಶನ್ ಮಾಡ್ಬೇಕು. ಇಲ್ಲ ಅಂದ್ರೆ ಡಿಫೆಕ್ಷನ್’ ಎಂದ ಪರ್ಮೇಶಿ.

‘ಅದಕ್ಕೇ ಯೋಳಾದು, ರೋಲಿಂಗ್ ಸ್ಟೋನ್ ಗ್ಯಾದರ್ಸ್ ನೋ ಮಾಸ್, ಉರುಳೋ ಕಲ್ಲಿಗೆ ಏನೂ ಮೆತ್ಕಳಲ್ಲ ಅಂತ’.

‘ಅಯ್ಯೋ ಏನ್ ಮೆತ್ಕಳುತ್ತೋ ಬಿಡುತ್ತೋ, ಇಂಗೇ ಎಲ್ಲಾ ಕಲ್ಲುಗಳು ಉರುಳಿ ನಮ್ ತಲೆ ಮೇಲೆ ಠಪಕ್ ಅಂತ ಬೀಳುತ್ವಲ್ಲ. ಇಂತೋರ್ ಹಿಂದಿರೋ ನಮ್ಮಂತ ಕಾರ್ಯಕರ್ತರ ಮೂತಿಗೂ ಎಲ್ಲೂ ಏನೂ ಮೆತ್ಕಳ್ದಂಗ್ ಆಗೋಗದೆ’ ಎಂದು ಹಲುಬಿದ ಗುದ್ಲಿಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.