ADVERTISEMENT

ಚುರುಮುರಿ: ಆಫ್ಟರ್ ಮಿ...

ಆನಂದ ಉಳಯ
Published 24 ಜುಲೈ 2022, 19:30 IST
Last Updated 24 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ತಂದೆ–ತಾಯಿ ಮಕ್ಕಳಿಗೆ ತಮ್ಮ ಆಸ್ತಿ ಬಿಟ್ಟು ಕೊಟ್ಟಂತೆ ಈಗ ಜನ ತಮ್ಮ ಕ್ಷೇತ್ರ ಬಿಟ್ಟು ಕೊಡೋದಿಕ್ಕೆ ಹೊರಟಿದಾರೆ ನೋಡ್ರೀ’ ಎಂದಳು ಶ್ರೀಮತಿ.

‘ಏನು ಹಾಗಂದರೆ?’

‘ಅದೇ ಯಡಿಯೂರಪ್ಪನವರು ಮಗನಿಗೆ ತಮ್ಮ ಶಿಕಾರಿಪುರ ಕ್ಷೇತ್ರ, ಯತೀಂದ್ರ ತಂದೆಗೆ ವರುಣ ಕ್ಷೇತ್ರ, ಕೋಳಿವಾಡರು ಪುತ್ರನಿಗೆ ರಾಣೆಬೆನ್ನೂರು ಕ್ಷೇತ್ರ ಬಿಟ್ಟುಕೊಡಲಿದ್ದಾರೆ’.

ADVERTISEMENT

‘ಹೋ! ಹಾಗಿದ್ದರೆ ಪಕ್ಷದ ವರಿಷ್ಠರಿಗೆ ಕ್ಷೇತ್ರ ಅಲಾಟ್ ಮಾಡೊ ಕೆಲಸ ಕಡಿಮೆ ಆಗುತ್ತೆ. ನಿವೃತ್ತರಾಗುವ ಶಾಸಕರು ಮಕ್ಕಳಿಗೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಮೇಲೆ ಉಳಿದ ಕಡೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಆಯಿತು...’

‘ಅಂದರೆ ಅಂತಹ ಕ್ಷೇತ್ರಗಳು ಅವರು ಮಾಡಿದ ಆಸ್ತಿ ತರಹಾ ವಂಶಪಾರಂಪರ್ಯಾನೇ? ಅಲ್ಲಿ ಬೇರೆ ಅರ್ಹರು ಇರೊಲ್ಲವೆ?’

‘ಇದ್ದರೂ ಇವರಿಗೆ ಆ ಕ್ಷೇತ್ರದ ಬಗ್ಗೆ ಅಷ್ಟು ಅಭಿಮಾನ. ತಮ್ಮ ಕುಟುಂಬದವರೇ ಅಲ್ಲಿನ ಜನರ ಸೇವೆ ಮಾಡಬೇಕೆಂಬ ಆಸೆ’.

‘ಅಲ್ರೀ ನಾಳೆ ಇದೇ ಪ್ರವೃತ್ತಿ ಹಬ್ಬಿದರೆ?’

‘ಏನು ಹಾಗೆಂದರೆ?’

‘ನಾನು ರೆವಿನ್ಯೂ ಮಂತ್ರಿ ಆಗಿದ್ದೆ. ನನ್ನ ಮಗನಿಗೂ ಅದೇ ಖಾತೆ ಕೊಡಬೇಕು ಎಂದು ಒತ್ತಡ ತರಬಹುದು. ಅಥವಾ ನಾನು ರಿಟೈರ್ ಆಗೋ ಟೈಂನಲ್ಲಿ ಬಿಡಿಎ ಚೇರ್ಮನ್ ಆಗಿದ್ದರಿಂದ ನನ್ನ ಮಗನಿಗೂ ಅದೇ ಹುದ್ದೆ ಕೊಡಬೇಕು ಅಂದರೆ?’

‘ಯು ಹ್ಯಾವ್ ಎ ಪಾಯಿಂಟ್. ಕ್ರಿಕೆಟ್ ತಂಡದ ನಾಯಕ, ನಾನು ನಿವೃತ್ತಿ ಘೋಷಿಸಿದ ನಂತರ ನನ್ನ ಮಗನನ್ನೇ ಕ್ಯಾಪ್ಟನ್ ಮಾಡಬೇಕು ಅಂದರೆ?’

‘ಕೊಹ್ಲಿಗೆ ಮಾಡೋದಿಕ್ಕೆ ಆಗ್ತಾ ಇಲ್ಲ ಬಿಡಿ. ಅವರ ಮಗ ಇನ್ನೂ ಅಂಬೆಗಾಲಿಡ್ತಾ ಇದಾನೆ’.

‘ಸಿನಿಮಾ ಹೀರೊ ಆಫ್ಟರ್ ಮಿ ಮೈ ಸನ್ ಎಂದು ಘೋಷಿಸಿದರೆ?’

‘ಅಪ್ಪ ಪ್ರೊಡ್ಯೂಸರ್ ಆದರೆ ಹಾಗೆ ನಡೆಯಲೂಬಹುದು’.

‘ಅಮಿತಾಭ್‌ ಬಚ್ಚನ್ ಹಾಗೆ ಹೇಳದಿದ್ದರೂ ಅವರ ಮಗ ಹೀರೊ ಆದ. ನಮ್ಮ ಶಾಸಕರು ಜಾಗ ತ್ಯಾಗ ಮಾಡಿದರೆ ಮಕ್ಕಳು ಗೆಲ್ಲುವರೆ?’

‘ಕಾದು ನೋಡಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.